ಮಂಜೇಶ್ವರ:- ಕೋವಿಡ್ ನಿಯಂತ್ರಣದ ನೆಪದಲ್ಲಿ ಪದೇ ಪದೇ ನಿರ್ಬಂಧಗಳನ್ನು ಹೇರಿ ಸುತ್ತೋಲೆ ಹೊರಡಿಸುವ ದ.ಕ.ಜಿಲ್ಲಾಡಳಿತದ ಕ್ರಮ ಅಮಾನವೀಯ ಎಂದು ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದ್ದಾರೆ. ಸೆ.8ರಂದು ನೂತನ ಸುತ್ತೋಲೆ ಹೊರಡಿಸಿ, ಆಕ್ಟೋಬರ್ 31ರ ತನಕ ಕೇರಳದಿಂದ ಯಾರೊಬ್ಬರೂ ದ.ಕ.ಜಿಲ್ಲೆಗೆ ಪ್ರವೇಶಿಸುವುದು, ದ.ಕ.ಜಿಲ್ಲೆಯಿಂದ ಕೇರಳ ಪ್ರವೇಶಿಸುವುದನ್ನು ನಿರ್ಬಂಧಿಸಿರುವುದು ಅಮಾನವೀಯವಾದ ಕ್ರಮವಾಗಿದೆ, ಕಾಸರಗೋಡಿನ ಜನತೆಗೆ ಮಾಡಿದ ಅನ್ಯಾಯವಾಗಿದೆ ಮಾತ್ರವಲ್ಲ ಕೇಂದ್ರ ಸರಕಾರದ ಅನ್ ಲಾಕ್ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ ಈ ನಿಟ್ಟಿನಲ್ಲಿ ಪ್ರಸ್ತುತ ಸುತ್ತೋಲೆಯನ್ನು ಕೂಡಲೇ ಹಿಂತೆಗೆಯುವಂತೆ ಅವರು ಆಗ್ರಹಿಸಿದ್ದಾರೆ.
ಗಡಿನಾಡು ಕಾಸರಗೋಡಿನ ಜನತೆ ದ.ಕ.ಜಿಲ್ಲೆಯನ್ನು ಅವಲಂಬಿಸಿದ್ದು, ದಿನ ನಿತ್ಯ ಶಾಲಾ ಕಾಲೆಜುಗಳಿಗೆ ತೆರಳುವ ಸಹಸ್ರಾರು ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ, ಆರೋಗ್ಯ ತಪಾಸಣೆಗೆ ತೆರಳುವ ಸಹಸ್ರಾರು ರೋಗಿಗಳು, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಈ ಆದೇಶದಿಂದ ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ದಿನನಿತ್ಯ ಪರಸ್ಪರ ಎರಡು ಜಿಲ್ಲೆಗಳಿಗೆ ಉದ್ಯೋಗಕ್ಕಾಗಿ ತೆರಳುವವರು ಕಂಗಾಲಾಗಿದ್ದು, ಈ ರೀತಿ ರೋಗದ ಹೆಸರಿನಲ್ಲಿ ಜನರ ಸಂಚಾರ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವುದು ಪ್ರಜಾಪ್ರಭುತ್ವ ವಿರುದ್ಧವಾಗಿದೆ. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ.ಜಿಲ್ಲಾಧಿಕಾರಿ ಜಂಟಿಯಾಗಿ ಹೊರಡಿಸಿರುವ ಈ ಸುತ್ತೋಲೆಯು ಸಂಪೂರ್ಣ ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ಅಮಾನವೀಯವಾಗಿದ್ದು, ಕೂಡಲೇ ಇದನ್ನು ಹಿಂತೆಗೆಯುಂತೆ ಅವರು ಆಗ್ರಹಿಸಿದ್ದಾರೆ. ಗಡಿ ನಿರ್ಬಂಧ ಹೇರದಂತೆ ಇತ್ತೀಚೆಗೆ ಕರ್ನಾಟಕ ಉಚ್ಛ ನ್ಯಾಯಾಲದ ತೀರ್ಪಿಗೆ ವಿರುದ್ದವಾಗಿರುವ ಈ ಆದೇಶ ನ್ಯಾಯಾಲಯದ ಉಲ್ಲಂಘನೆಯಾಗಿದೆ, ಇದರ ವಿರುದ್ಧ ನ್ಯಾಯಯುತ ಹೋರಾಟ ನಡೆಸಲಾಗುವುದೆಂದು ಅವರು ಹೇಳಿದ್ದಾರೆ.
