ಮಂಜೇಶ್ವರ ಶ್ರೀ ಗಣೇಶೋತ್ಸವ ಸಂಪನ್ನ | ವೈಭವದ ವಿಸರ್ಜನಾ ಶೋಭಾಯಾತ್ರೆ
September 14, 2021
0
ಮಂಜೇಶ್ವರ:- ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ 41 ನೇ ವರ್ಷದ ಮಂಜೇಶ್ವರದ ಶ್ರೀ ಗಣೇಶೋತ್ಸವವು ಇಂದು ಮುಸ್ಸಂಜೆಯ ವೇಳೆ ಕಣ್ವತೀರ್ಥದ ಶ್ರೀ ರಾಮ ಸಮುದ್ರದಲ್ಲಿ ಶ್ರೀ ಮಹಾಗಣಪತಿಯು ಗಂಗೆಗೆ ಸಮರ್ಪಣೆಯಾಗುವುದರೊಂದಿಗೆ ಸಂಪನ್ನಗೊಂಡಿತು. ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಪೂಜೆ, ಧ್ವಜಾವರೋಹಣ, ಬಳಿಕ ಜಲಸ್ತಂಭನ ಶೋಭಯಾತ್ರೆಯು ಹೊರಟು ಹೊಸಂಗಡಿ ಜಂಕ್ಷನ್ ಗೆ ತಲುಪಿ, ಅಲ್ಲಿಂದ ಹಿಂತಿರುಗಿ, ವಿವಿಧ ದೇವಸ್ಥಾನ, ಮಠ, ಮಂದಿರಗಳ ಮೂಲಕ ಸಾಗಿ ಕಣ್ವತೀರ್ಥದ ಶ್ರೀ ರಾಮ ಸಮುದ್ರದಲ್ಲಿ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಬೋವಿ ಸಮಾಜದವರ ನೇತೃತ್ವದಲ್ಲಿ ವಿಗ್ರಹವನ್ನ ಜಲಸ್ತಂಭನಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಗವದ್ಭಕ್ತರು ಸಮುದ್ರ ತೀರದಲ್ಲಿ ಸೇರಿ, ಕೋವಿಡ್ ನಿಯಮಗಳನ್ನ ಪಾಲಿಸಿಕೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾದರು. ಸಮುದ್ರದಲ್ಲಿ ತೆರೆಗಳ ಬಡಿತ ಹೆಚ್ಚಿದ್ದುದ್ದರಿಂದ ಯಾವುದೇ ಭಕ್ತರನ್ನ ಸಮುದ್ರದ ನೀರಿಗೆ ಇಳಿಯದಂತೆ ಸಮಿತಿ ನಿಗಾ ವಹಿಸಿತ್ತು. ಶೋಭಾಯಾತ್ರೆಯ ಹಾದಿ ಮಧ್ಯೆ ಭಕ್ತಾದಿಗಳು ಆರತಿ ಬೆಳಗಿ ಶ್ರೀ ಮಹಾಗಣಪತಿಯನ್ನ ಸ್ವಾಗತಿಸಿದ್ದು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಪಧಾಧಿಕಾರಿಗಳು ಹಾಗೂ ಪೊಲೀಸ್ ಠಾಣೆಯ ಅಧಿಕೃತರು ಶೋಭಯಾತ್ರೆಯು ಸಾಂಗವಾಗಿ ನೆರವೇರಲು ಸಹಕರಿಸಿದರು.
