ಮಂಜೇಶ್ವರ: ಯುವಶಕ್ತಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಧರ್ಮಸಂಸ್ಕೃತಿ ಉಳಿವು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾನ್ವಿ ಶ್ರೀ ಮಾತಾನಂದಮಯಿ ಹೇಳಿದರು. ಅವರು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಇಂದು ಸಂಜೆ "ಶ್ರೀ ಸುದರ್ಶನ ವೇದಿಕೆ" ಯಲ್ಲಿ ನಡೆದ ತೃತೀಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಶೀರ್ವಚನವಿತ್ತರು.
ಆತ್ಮಶಕ್ತಿ ಜೊತೆಯಾದರೆ ಉನ್ನತಿ ಸಾಧ್ಯ ಎಂದ ಅವರು, ಊರಿಗೆ ಆತ್ಮವಾಗಿ, ಅಂತರಂಗ ವಿಕಸನಕ್ಕೆ ದೇವಸ್ಥಾನ ಅಗತ್ಯವಿದೆ. ಸಮಾಜಕ್ಕೆ ಇದು ಪ್ರಭಾವ ಬೀರುತ್ತದೆ ಎಂದರು. ಅನ್ಯಾಯ, ಅಧರ್ಮ ದೂರ ಮಾಡಲು ಧರ್ಮ, ಸಂಸ್ಕೃತಿ ನೆಲೆವೀಡಾಗಬೇಕು ಎಂದರು. ಆತ್ಮಬಲ, ಆತ್ಮವಿಶ್ವಾಸ ಅಗತ್ಯ,ಬ್ರಹ್ಮಕಲಶೋತ್ಸವ ಬಳಿಕವೂ ದೇವಾಲಯಗಳಿಗೆ ಜನರು ಆಗಾಗ ಬರುತ್ತಿದ್ದರೆ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ವಹಿಸಿದ್ದರು. ವಿ.ಎಚ್.ಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಮೀರಾ ಆಳ್ವ ಧಾರ್ಮಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ. ಪಾವೂರು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್, ಬಾಕುಡ ಸಮಾಜ ಕೇರಳ - ಕರ್ನಾಟಕ ಅಧ್ಯಕ್ಷೆ ಶ್ರೀಮತಿ ಸುಜಾತ ಮಂಜೇಶ್ವರ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಶ್ರೀಮತಿ ಶಾವಂತಿ ರೈ ಮಂಗಳೂರು, ಶ್ರೀಮತಿ ಹೇಮಾ ರಾಘವೇಂದ್ರ ಸರಳಾಯ ಬೆಹರೈನ್, ಶ್ರೀಮತಿ ಮುಕ್ತಾಮಣಿ ಅಡ್ಯಂತಾಯ ಮೂಡಿಗೆರೆ, ಶ್ರೀಮತಿ ಕವಿತಾ ರೈ ಮಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಪ್ರಸನ್ನ ಲಕ್ಷ್ಮಿ ಪ್ರಾರ್ಥನೆ ಹಾಡಿ, ಶ್ರೀಮತಿ ಸುಮನಾ ವಾಸುದೇವ ಶೆಟ್ಟಿಗಾರ್ ಸ್ವಾಗತಿಸಿ, ಶ್ರೀಮತಿ ಶಕೀಲಾ ಶೆಟ್ಟಿ ಧರ್ಮೇಮಾರ್ ಹಾಗೂ ಶ್ರೀಮತಿ ಉಷಾ ಚಿದಂಬರ ಕೋಡಿಜಾಲು ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶ್ರುತಿ ಶೆಟ್ಟಿ ತಲೆಕಳ ವಂದಿಸಿದರು.
ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದ ಧರ್ಮದರ್ಶಿ ಶ್ರೀ ಕೃಷ್ಣ ಭಟ್ ರಿಂದ ಧಾರ್ಮಿಕ ಉಪನ್ಯಾಸ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ,ಉ ನಡೆಯಿತು.
ಸಂಜೆ ಸಂಹಾರ ತತ್ವಹೋಮ, ಶ್ರೀ ಮಹಾವಿಷ್ಣು ದೇವರು ಮತ್ತು ಪರಿವಾರ ದೇವರ ಶಯ್ಯಾದಿವಾಸ, ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು, ರಾತ್ರಿ ಅನ್ನ ಸಂತರ್ಪಣೆ ನಡೆಯಿತು.
✍️ ವರದಿ: ಶ್ರೀ ರತನ್ ಕುಮಾರ್ ಹೊಸಂಗಡಿ.
📸 ಚಿತ್ರಗಳು: ಶ್ರೀ ದೀಪಕ್ ರಾಜ್ ಉಪ್ಪಳ.
ಪತ್ರಿಕಾ/ ದೃಶ್ಯ ಮಾಧ್ಯಮ ಸಮಿತಿ ಬ್ರಹ್ಮಕಲಶೋತ್ಸವ.


