ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 20ನೇ ಚಾತುರ್ಮಾಸ್ಯ ವ್ರತಾಚರಣೆ ಶುಭಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರು ವತಿಯಿಂದ ಯುವಕರಿಗೆ ವಸ್ತ್ರವಿತರಣೆಯ ‘ಅರ್ಪಣಾ’ ಕಾರ್ಯಕ್ರಮ ಶ್ರೀಮಠದ ಗಾಯತ್ರೀ ಮಂಟಪದಲ್ಲಿ ನಡೆಯಿತು. ಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮೀ ಜಿತಕಾಮಾನಂದಜೀಯವರು ದೀಪ ಪ್ರಜ್ವಾಲನೆಗೈದು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು “120 ವರ್ಷಗಳ ಹಿಂದೆ ಸ್ವಾಮೀ ವಿವೇಕಾನಂದರು ಸೇವೆಯ ಉದ್ದೇಶದಿಂದ ಸ್ಥಾಪನೆಗೈದ ರಾಮಕೃಷ್ಣ ಮಿಷನ್ ದೇಶಾದ್ಯಂತ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರಸ್ತುತ ಕೊಂಡೆವೂರು ಮಠದ ಸಹಯೋಗದಲ್ಲಿ ಈ ವಿಶಿಷ್ಟ ಅರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ನಾವೆಲ್ಲರೂ ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿ, ಜಗತ್ತಿಗೆ ಒಳಿತು ಮಾಡುತ್ತಾ ಭಗವಂತನೆಡೆಗೆ ಸಾಗೋಣ”ಎಂದು ಕರೆ ನೀಡಿದರು. ದಿವ್ಯಸಾನ್ನಿಧ್ಯ ವಹಿಸಿದ ಕೊಂಡೆವೂರು ಶ್ರೀಗಳು ರಾಮಕೃಷ್ಣ ಮಿಷನ್ ಸೇವಾ ಚಟುವಟಿಕೆಗಳನ್ನು ಶ್ಲಾಘಿಸುತ್ತಾ “ಸಮಾಜದ ಎಲ್ಲರ ಮೇಲೂ ಕಳಕಳಿ ತೋರಿ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಜೊತೆ ಕೈಜೋಡಿಸಲು ಸಂತಸವಾಗುತ್ತಿದೆ” ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಎಂ.ಎಲ್.ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ‘ಇಡೀ ಜಗತ್ತೇ ಒಂದು ಎನ್ನುವ ಸೇವಾಮನೋಭಾವದ ಯತಿದ್ವಯರ ಚಟುವಟಿಕೆಗಳಲ್ಲಿ ಪಾಲುದಾರನಾಗಿರುವುದಕ್ಕೆ ಹೆಮ್ಮೆಯಾಗಿದೆ’ಎಂದರು. ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
350ಕ್ಕೂ ಹೆಚ್ಚು ಯುವಕರು ವಸ್ತ್ರಪ್ರಸಾದ ಪಡೆದ ಈ ಕಾರ್ಯಕ್ರಮದಲ್ಲಿ ಕು.ಶ್ರಾವಣ್ಯ ಪ್ರಾರ್ಥನೆ, ಶ್ರೀ ಗಂಗಾಧರ ಕೊಂಡೆವೂರು ಸ್ವಾಗತಿಸಿ, ಶ್ರೀ ದಿನಕರ ಹೊಸಂಗಡಿಯವರು ನಿರೂಪಿಸಿದರು.



