ಪೆರ್ಲ : ಕೇರಳ ರಾಜ್ಯ ಎಸ್ಸಸ್ಸೆಲ್ಸಿ ಕನ್ನಡ ಮಾಧ್ಯಮ ಮಕ್ಕಳ ಕಲಿಕೆಗೆ ಸಹಾಯಕವಾಗಿ ಎಲ್ಲಾ ಪಾಠವನ್ನೊಳಗೊಂಡ ಚಾನೆಲ್ ಪರ ಬೋಧಕ ವಿಷಯದ "ಎಸ್ಸಸ್ಸೆಲ್ಸಿ ಎಕ್ಸಾಮ್ ವಿನ್ನರ್ ಕನ್ನಡ" ಚಾನೆಲ್ ಲೋಕಾರ್ಪಣೆಗೊಂಡಿತು. ಟೀಮ್ ಕನ್ನಡ ಕಾಸರಗೋಡು ನೇತೃತ್ವದಲ್ಲಿ ತಯಾರಿಗೊಂಡ ಚಾನೆಲನ್ನು ಪೆರ್ಲ ಸಮೀಪದ ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ, ಸಂಶೋಧಕ, ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಬಿಡುಗಡೆಗೊಳಿಸಿದರು. ಬಳಿಕ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕಾಸರಗೋಡಿನಲ್ಲಿ ಕನ್ನಡ ಅಳಿಯುತ್ತಿರುವ ಸಂದರ್ಭದಲ್ಲಿ ಇದರ ಉಳಿವಿಗಾಗಿ ಮಾಡುವ ಕಿಂಚಿತ್ ಕಾರ್ಯವೂ ಕೂಡ ಕನ್ನಡಿಗರ ಮನದಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುತ್ತಿದೆ. ಕನ್ನಡಕ್ಕಾಗಿ ಮಿಡಿಯುವ ಜನರೊಂದಿಗೆ ಇಲ್ಲಿನ ಕನ್ನಡಪರ ಸಂಘಟನೆಗಳು,ಮುಂದಾಳುಗಳು, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಗಳು ಪ್ರೋತ್ಸಾಹಿಸಿ ಬೆಂಬಲ ನೀಡಬೇಕಾಗಿದೆ. ಹಾಗಾದರೆ ಮಾತ್ರ ಮುಂದಿನ ಭವಿಷ್ಯಕ್ಕೆ ಇಲ್ಲಿನ ಕನ್ನಡದ ಕಂಪು ಹಸ್ತಾಂತರಿಸಲು ಸಾಧ್ಯ ಎಂದರು. ಚಾನೆಲ್ ನ ಕಾರ್ಯ ಚಟುವಟಿಕೆಯ ಬಗ್ಗೆ ಚಂದ್ರಕಲಾ ನಿರಾಳ ಪ್ರಾಸ್ತವನೆಗೈದರು. ಟೀಮ್ ಕನ್ನಡ ಕಾಸರಗೋಡಿನ ಬೇಬಿ ಜಯರಾಮ್, ಉದಯ ಕುಮಾರ್ ಎಂ, ವನಜಾಕ್ಷಿ ಚಂಬ್ರಕಾನ, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಬೇರಿಕೆ ಸ್ವಾಗತಿಸಿ ಸುಂದರ ಬಾರಡ್ಕ ವಂದಿಸಿದರು. ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು.
ಕನ್ನಡ ಮಕ್ಕಳ ಕಲಿಕಾ ಮಾರ್ಗದರ್ಶಿಯಾಗಿ "ಎಸ್ಸಸ್ಸೆಲ್ಸಿ ಎಕ್ಸಾಮ್ ವಿನ್ನರ್ ಕನ್ನಡ" ಚಾನೆಲ್ ಲೋಕಾರ್ಪಣೆ
August 06, 2024
0
Tags

