ಮಂಗಳೂರು : ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿ, ಹನುಮಗಿರಿ ಮೇಳದ ಹಿರಿಯ ಕಲಾವಿದ, ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ರವರು ರವಿವಾರ (ಜು.20) ಮಧ್ಯಾಹ್ನ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಈ ಮೂಲಕ ತೆಂಕುತಿಟ್ಟು ಯಕ್ಷಗಾನದ ಮತ್ತೊಂದು ಕೊಂಡಿ ಕಳಚಿದಂತಾಗಿದೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.ಅಪಾರ ಅಭಿಮಾನಿ ಮಿತ್ರವೃಂದವನ್ನು ಹೊಂದಿದ ಇವರು ಕಳೆದ ತಿರುಗಾಟದ ಕೊನೆಯವರೆಗೂ ಹನುಮಗಿರಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದರು. ಮೂರು ದಶಕಗಳಿಗೂ ಹೆಚ್ಚಿನ ಕಾಲ ತಿರುಗಾಟ ಮಾಡಿದವರು.
ಬಣ್ಣದ ವೇಷಧಾರಿಯಾಗಿ ಹೆಜ್ಜೆ ಗುರುತು ಮೂಡಿಸಿದವರು.
ಯಕ್ಷಗಾನ ಗುರುಗಳಾದ ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರಿಂದ ನಾಟ್ಯಾಭ್ಯಾಸ ಕಲಿತು ಸುಮಾರು 36 ವರ್ಷಗಳ ಕಟೀಲು, ಧರ್ಮಸ್ಥಳ, ಹೊಸನಗರ, ಎಡನೀರು, ಹನುಮಗಿರಿ ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಳೆದ ಕೆಲವು ತಿಂಗಳ ಹಿಂದಷ್ಟೇ ಹನುಮಗಿರಿ ಮೇಳದಲ್ಲಿ ತಿರುಗಾಟ ಮುಗಿಸಿದ ಇವರು ನಿವೃತ್ತಿಯನ್ನೂ ಘೋಷಣೆ ಮಾಡಿದ್ದರು. ಚೌಕಿಯ ಕೆಲಸದಾಳಾಗಿ ಕಟೀಲು ಮೇಳದಲ್ಲಿ ಯಕ್ಷಗಾನ ಪಯಣ ಆರಂಭಿಸಿದ್ದ ಇವರು ಬಣ್ಣದ ಮಹಾಲಿಂಗನವರ ವೇಷಗಳನ್ನು ನೋಡಿ ಬೆರಗಾಗಿ ಪ್ರೇರಿತರಾದವರು.
ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹತ್ತು ದಿನಗಳ ಹಿಂದಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದರು. ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದರು.



