ನಡೆಯುತಿದೆ ಭರವಸೆಯ ಓಟ
ಮನವೇಕೊ ಮರುಗುತಿದೆ
ಕಂಡು ವಿಧಿಯ ಆಟ ||
ಕನಸು ಕಟ್ಟಿ ಹೊರಟವರ
ಕೈ ಕಟ್ಟಿ ಹಾಕಿದೆ ವೈರಾಣು
ಬದುಕ ನೋಡದವರನ್ನೂ
ಕಣ್ಮುಚ್ಚಿಸುತ್ತಿದೆ ಬೇಕಿನ್ನೇನು?
ಉಸಿರಾಡೋ ಗಾಳಿಗೂ
ಬೆಲೆತೆರುವ ಕಾಲವಿದು
ಅದರಲ್ಲೂ ಲಾಭ ಪಡೆಯೋ
ವಿಕೃತಿಯ ಕಾಣುತ್ತಿರುವೆವಿಂದು ||
ಪರಿಸ್ಥಿತಿಯ ನೆನೆದು
ಅಳುವುದರಲಿಲ್ಲ ಪ್ರಯೋಜನ
ಇನ್ನಾದರೂ ತಮ್ಮ ಕ್ಷೇಮವ
ತಾವೇ ನೋಡಿಕೊಳ್ಳಬೇಕು ಜನ||
ವ್ಯವಸ್ಥೆಯ ದೋಷವ
ಎತ್ತಿ ಕಾಣಿಸುವುದು ತಪ್ಪಲ್ಲ
ಅವಸ್ಥೆಯ ಅರಿತುಕೊಂಡು
ನಿಯಮ ಪಾಲನೆಯೂ ಬೇಕಲ್ಲ?
ಮರೆಯುತ್ತಿಹೆವು ನಾವು
ವೈದ್ಯರನ್ನು ಮನುಜರೆಂದು
ನಮಗೆ ಮನೆಯಲಿರಲು ಹೇಳಿ
ಮನೆಬಿಟ್ಟ ನಿಸ್ವಾರ್ಥಿಗಳೆಂದು ||
ಕಾಲ ಕಲಿಸುವ ಪಾಠವ
ಕಲಿಯುತ್ತಾ ಮುಂದೆ ಸಾಗುವ
ಮುಂದೆ ಬರುವ ಕಷ್ಟವ
ಧೈರ್ಯದಿಂದ ಎದುರಿಸುವ ||
ಶಿಲ್ಪಾ ಎಂ.ಡಿ
