ಕಾಸರಗೋಡು:- ಕರಂದಕ್ಕಾಡು ಶಿವಾಜಿ ನಗರದ ಶ್ರೀ ವಿಶ್ವಕರ್ಮ ಭಜನಾ ಮಂದಿರದ ವತಿಯಿಂದ ಕಳೆದ ಹಲವು ದಿನಗಳಿಂದ ಅಸೌಖ್ಯ ಪೀಡಿತರಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕ್ಕೊಳಗಾಗಿ ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪುತ್ತಿಗೆ ನಿವಾಸಿ ದಿ. ರಾಘವ ಆಚಾರ್ಯ - ಚಂದ್ರಾವತಿ ದಂಪತಿಗಳ ಅವಳಿ ಪುತ್ರರ ಪೈಕಿ ಕುಶ ಆಚಾರ್ಯರಿಗೆ ಮಂದಿರದ ವಾಟ್ಸಪ್ ಗ್ರೂಪ್ ನಲ್ಲಿ ಸಂಗ್ರಹಗೊಂಡ 20,700 ರೂಪಾಯಿ ಮೊತ್ತವನ್ನು ಕುಶ ಆಚಾರ್ಯರ ಮನೆಗೆ ತೆರಳಿ ಕಾಸರಗೋಡಿನ ನ್ಯಾಯವಾದಿ ರಾಜೇಶ್ ಆಚಾರ್ಯ ಇವರ ಮುಖಾಂತರ ಮೊತ್ತವನ್ನು ಹಸ್ತಾಂತರಿಸಲಾಯಿತು. ಈ ವೇಳೆ ಯುವಕ ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾಮಾಜಿಕ ಕಳಕಳಿಯ ಆಶಯದಂತೆ, ಸಮಾಜದಲ್ಲಿ ಅತ್ಯಂತ ಕಷ್ಟದಲ್ಲಿರುವ ಬಂಧುಗಳಿಗೆ ಶ್ರೀ ವಿಶ್ವಕರ್ಮ ಭಜನಾ ಮಂದಿರದ ವತಿಯಿಂದ ಕಳೆದ ಹಲವು ವರ್ಷಗಳಿಂದ ತಮ್ಮಿಂದಾದ ಸಹಾಯವನ್ನು ನೀಡುತ್ತಾ ಬರುತ್ತಿದ್ದು,
ಕುಶ ಆಚಾರ್ಯರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಯಲ್ಲಿದ್ದರು. ಈ ಸಂದರ್ಭದಲ್ಲಿ ಹಲವು ಸಂಘ ಸಂಸ್ಥೆಗಳು ಇವರಿಗೆ ಸಹಕರಿಸಿದ್ದಾರೆ. ಅದೇ ರೀತಿ ಇದೇ ವಿಷಯವನ್ನು ಶ್ರೀ ವಿಶ್ವಕರ್ಮ ಯುವಕ ಸಂಘದ ಸಭೆಯಲ್ಲಿ ಪ್ರಸ್ತಾಪ ಮಾಡಿದಾಗ ಅಲ್ಲಿ ಕೈಗೊಂಡ ನಿರ್ಣಯದಂತೆ ಮಂದಿರದ ವಾಟ್ಸಾಪ್ ಗ್ರೂಪಿನ ಮೂಲಕವೂ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಧನಸಹಾಯ ನೀಡುವಂತೆ ಸಮಾಜ ಬಾಂಧವರಲ್ಲಿ ವಿನಂತಿಸಿಕೊಂಡಿದ್ದರು. ಆ ನಿಟ್ಟಿನಲ್ಲಿ ಸಂಘದ ಮುಖಾಂತರ ಸಂಗ್ರಹವಾದ ಹಣವನ್ನು ಕುಶ ಆಚಾರ್ಯ ಅವರಿಗೆ ಹಸ್ತಾಂತರಿಸಲಾಯಿತು. ಅಲ್ಲದೆ ವಾಟ್ಸಾಪ್ ಗುಂಪಿನ ಹಲವು ಸದಸ್ಯರು ನೇರವಾಗಿ ಕುಶ ಆಚಾರ್ಯ ಅವರ ಪತ್ನಿ ಸುಜಾತ ಆಚಾರ್ಯರ ಬ್ಯಾಂಕ್ ಖಾತೆಗೂ ಹಣ ವರ್ಗಾಯಿಸಿರುತ್ತಾರೆ.
ಶ್ರೀಯುತರು ಶೀಘ್ರ ಗುಣಮುಖರಾಗಲೆಂದು ಪರಮಪೂಜ್ಯ ಶ್ರೀ ಗುರುಗಳ, ಹಾಗೂ ಆರಾಧ್ಯ ದೇವರಾದ ಶ್ರೀ ಕಾಳಿಕಾಂಬೆಯು ಮತ್ತು ಸಕಲ ದೇವರುಗಳಲ್ಲಿ ಪ್ರಾರ್ಥನೆ. ಯುವಕ ಸಂಘದ ಕಾರ್ಯ ಚಟುವಟಿಕೆಗೆ ಪ್ರೋತ್ಸಾಹಿಸಿ, ಸಹಕರಿಸಿದ ಸಮಾಜ ಬಾಂಧವರಿಗೆ, ಸಂಘದ ಸರ್ವ ಸದಸ್ಯರಿಗೂ ಭಗವಂತನು ಸದಾ ಸನ್ಮಂಗಲವನ್ನು ಕರುಣಿಸಲೆಂದು ಪ್ರಾರ್ಥನೆ.
ಶ್ರೀ ವಿಶ್ವಕರ್ಮ ಭಜನಾ ಮಂದಿರದ ಹಿನ್ನಲೆ:-
1957 ಫೆಬ್ರವರಿ ತಿಂಗಳ ಪ್ರಥಮ ಶನಿವಾರದಿಂದ ಪ್ರಾರಂಭವಾದ ಕಾಸರಗೋಡಿನ ಶ್ರೀ ವಿಶ್ವಕರ್ಮ ಭಜನಾ ಸಂಘವು ಇಂದು ಹಲವು ರೀತಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. 1990 ರಲ್ಲಿ ಯುವಕರೆಲ್ಲ ಸೇರಿ ಶ್ರೀ ವಿಶ್ವಕರ್ಮ ಯುವಕ ಸಂಘವೊಂದನ್ನು ಹುಟ್ಟುಹಾಕಿ ಹೊಸ ತಿರುವನ್ನು ಕೊಟ್ಟು ಮಂದಿರ ಹಾಗೂ ಸಭಾ ಭವನವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡರು. ಜೊತೆಗೆ ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕೂಡಾ ಅಸ್ತಿತ್ವಕ್ಕೆ ಬಂದಿತು. ಕಾಸರಗೋಡಿನ ಹೃದಯ ಭಾಗದಲ್ಲಿ 18 ಸೆಂಟ್ಸ್ ಜಾಗವನ್ನು ಖರೀದಿಸಿ ಊರ ಪರವೂರ ಮಹಾದಾನಿಗಳ ಸಹಾಯ ಸಹಕಾರದಿಂದ 2015 ರಲ್ಲಿ 'ಶ್ರೀ ವಿಶ್ವಕರ್ಮ ಭಜನಾ ಮಂದಿರ' ನಿರ್ಮಾಣಗೊಂಡು 'ಪ್ರತಿಷ್ಠಾ ಮಹೋತ್ಸವು' ಜರಗಿತು. ಜೊತೆಗೆ ಸಮಾಜ ಸೇವಾ ಚಟುವಟಿಕೆಯನ್ನು ಕೂಡಾ ನಡೆಸಿಕೊಂಡು ಬರಲಾಗುತ್ತಿದೆ. 2016 ರಲ್ಲಿ ಹೆಚ್ಚಿನ ಸಮಾಜ ಬಾಂಧವರನ್ನು ಸೇರಿಸಿಕೊಂಡು “ಶ್ರೀವಿಶ್ವಕರ್ಮ ಮಂದಿರ ಕಾಸರಗೋಡು” ಎಂಬ ಹೆಸರಿನಲ್ಲಿ ಒಂದು ವಾಟ್ಸಾಪ್ ಗುಂಪು ರಚಿಸಿಕೊಂಡ ಕಾರಣ ಕಾರ್ಯ ಚಟುವಟಿಕೆಯನ್ನು ಇನ್ನಷ್ಟು ಚುರುಕುಗೊಳಿಸಲು ಸಾಧ್ಯವಾಯಿತು.
ಕಳೆದ ಬಾರಿ ಕೇರಳದಲ್ಲಿ ಭೀಕರ ಜಲಪ್ರವಾಹ ಉಂಟಾದಾಗ ಸಂಘದ ವತಿಯಿಂದ ಮಂದಿರದ ವಾಟ್ಸಾಪ್ ಗ್ರೂಪಿನಲ್ಲಿ “ಕೇರಳ ನೆರೆ ಸಂತ್ರಸ್ತ ನಿಧಿ ಸಂಗ್ರಹ” ಎಂಬ ಪೋಸ್ಟರ್ ಪ್ರಕಟಿಸಿತು. ಈ ವೇಳೆ ಹಣದ ರೂಪದಲ್ಲಿ ಹಾಗೂ ವಸ್ತುರೂಪದಲ್ಲಿ ಹಲವು ಕಡೆಗಳಿಂದ ಸಹಾಯ ಒದಗಿ ಬಂದಿದ್ದು, ಸಂಗ್ರಹಿಸಿ ಆಹಾರ ಸಾಮಾಗ್ರಿ ಹಾಗೂ ಬಟ್ಟೆಬರೆಗಳ ರೂಪದಲ್ಲಿ "ಸೇವಾ ಭಾರತಿ”ಯ ಮುಖಾಂತರ ಸಂತ್ರಸ್ತರಿಗೆ ತಲುಪಿಸಲಾಯಿತು.
ಜಗತ್ತನ್ನೇ ಆವರಿಸಿದ ಮಹಾಮಾರಿ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಹಲವು ತಿಂಗಳುಗಳ ಕಾಲ ಲಾಕ್ ಡೌನ್ ಆದೇಶಿಸಿದ ಕಾರಣ ಕೆಲಸಕ್ಕೂ ಹೋಗಲಾಗದೆ, ಆಹಾರ ಸಾಮಾಗ್ರಿ ಖರೀದಿಸಲೂ ಆಗದೆ ಮನೆಯಲ್ಲಿಯೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಂದಿರದ ಪಧಾಧಿಕಾರಿಗಳು ಮುಖತಃ ಸಭೆ ನಡೆಸಲು ಸಾಧ್ಯವಾಗದಿದ್ದರೂ ಆನ್ಲೈನ್ ಮೂಲಕ ಮುಖಾಂತರ ಸಭೆ ನಡೆಸಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ನೀಡಲು ವಾಟ್ಸಾಪ್ ಗುಂಪಿನಲ್ಲಿ ಮನವಿ ಕಳುಹಿಸಲಾಯಿತು. ಅದಕ್ಕೆ ಸ್ಪಂದಿಸಿದ ಸಮಾಜ ಬಾಂಧವರಿಂದ ಸಂಗ್ರಹವಾದ ಹಣ ಹಾಗೂ ಇನ್ನಿತರೆ ದಿನಬಳಕೆಯ ಸಾಮಾಗ್ರಿಗಳನ್ನು ಕಾಸರಗೋಡು ಹಾಗೂ ನೆರೆಯ ಊರಿನ ಸುಮಾರು 350 ಕ್ಕೂ ಹೆಚ್ಚಿನ ಮನೆಗಳಿಗೆ ಪೋಲೀಸರ ಸಹಾಯದಿಂದ ತಲುಪಿಸಲಾಯಿತು. ಲಾಕ್ ಡೌನ್ ಸಂದರ್ಭದಲ್ಲಿ ವಾಟ್ಸಾಪ್ ಚಿತ್ರ ರಚನೆ ಸ್ಪರ್ಧೆಯನ್ನು ಕೂಡಾ ಹಮ್ಮಿಕೊಳ್ಳುವ ಮೂಲಕ ಪ್ರತಿಭಾ ಪ್ರೋತ್ಸಾಹವನ್ನ ಮಾಡಿದ್ದು, ಮುಂದೆ ಸಂಘದ ವತಿಯಿಂದ ಸಭಾಭವನ ನಿರ್ಮಾಣ ಮಾಡುವ ಯೋಜನೆಯನ್ನು ಶ್ರೀ ವಿಶ್ವಕರ್ಮ ಯುವಕ ಸಂಘ, ಕಾಸರಗೋಡು ಹಮ್ಮಿಕೊಂಡಿದ್ದಾರೆ.
ವರದಿ ಮತ್ತು ಚಿತ್ರ : ರತನ್ ಕುಮಾರ್ ಹೊಸಂಗಡಿ
