ಮಂಜೇಶ್ವರ:- ಕೋವಿಡ್ ನ ಕಾಲಘಟ್ಟದಲ್ಲಿ ರಕ್ತದಾನ ಮಾಡುವ ಮೂಲಕ ಭಜರಂಗದಳದ ಕಾರ್ಯಕರ್ತರು ದೇಶಾದ್ಯಂತ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತಿದ್ದೇವೆ. ಕೋವಿಡ್ ನ ಕಾಲದಲ್ಲಿ ರಕ್ತವನ್ನು ಜನರು ಕೊಡಲು ಸಾಧ್ಯವಾಗದ ಸಮಯದಲ್ಲಿ ರಕ್ತದ ಕೊರತೆ ಆಗಬಾರದೆಂಬ ಸದ್ದುದೇಶದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಒಗ್ಗೂಡಿಸಿ ರಕ್ತದಾನದ ಈ ಮಹತ್ಕಾರ್ಯವನ್ನ ಮಾಡುತ್ತಿರುವುದಾದರೆ ಅದು ಬಜರಂಗದಳದಿಂದ ಮಾತ್ರವೆಂದು ಅಭಿಮಾನದಿಂದ ಹೇಳಬಲ್ಲೇ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮುರಳೀಕೃಷ್ಣ ಹಂಸತಡ್ಕ ಹೇಳಿದರು. ಅವರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಜೇಶ್ವರ ಪ್ರಖಂಡ ಸಮಿತಿ ವತಿಯಿಂದ ಅಯೋಧ್ಯ ಬಲಿದಾನ ದಿವಸ್ ಪ್ರಯುಕ್ತ ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ಇಂದು ಬೆಳಗ್ಗೆ ನಡೆದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆ ವೇಳೆ ಬೌದ್ಧಿಕ್ ನೀಡಿ ಮಾತನಾಡಿದರು.
ಯುವಕರ ಸಂಘಟನೆ ಮಾಡಬೇಕೆಂದು ಸಂಕಲ್ಪದಲ್ಲಿ ಹಿರಿಯ ಆಲೋಚನೆ ಮಾಡಿ ಹುಟ್ಟಿಕೊಂಡ ಸಂಸ್ಥೆಯೇ ಭಜರಂಗದಳ. ರಾಮ್ ಕೊಟ್ಟಾರಿ ಹಾಗೂ ಶರದ್ ಕೊಟ್ಟಾರಿಯವರು ಹಿಂದೂ ಸಮಾಜದ ಶೌರ್ಯವನ್ನು ಜಗತ್ತಿಗೆ ಸಾರಬೇಕೆಂದು ಉದ್ದೇಶದಿಂದ ಅಯೋಧ್ಯೆಯಲ್ಲಿ ಕೇಸರಿ ಧ್ವಜವನ್ನು ನೆಟ್ಟು ಇಂದು ಹುತಾತ್ಮರಾದ ಇವರ ಬಲಿದಾನಕ್ಕಾಗಿ ಗೌರವ ಅಭಿಮಾನ ಹಿಂದೂ ಸಮಾಜಕ್ಕಿದೆ. ಶ್ರೀರಾಮನ ಕಾರ್ಯವನ್ನು ಮಾಡುವ ಹಲವಾರು ಕಾರ್ಯಕರ್ತ ಬಂಧುಗಳು ಹಿಂದೂ ಸಮಾಜದಲ್ಲಿ ಇದ್ದಾರೆ ಅದನ್ನ ಭಜರಂಗದಳದಂತ ಯುವ ಸಂಘಟನೆಗಳು ನಿರೂಪಿಸುತ್ತವೆ ಎಂದು ಅವರು ಹೇಳಿದರು.
ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿ.ಹಿಂ.ಪ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಜಯದೇವ ಖಂಡಿಗೆ ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನ ಉದ್ಗಾಟಿಸಿದರು. ವಿ.ಹಿಂ.ಪ ಮಂಜೇಶ್ವರ ಪ್ರಖಂಡ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಂಹಿಯ ಅಧ್ಯಕ್ಷತೆಯನ್ನ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣರ್ ದೈವಗಳ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಡಾ. ಜಯಪಾಲ್ ಶೆಟ್ಟಿ, ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ. ಭವಾನಿ ಶಂಕರ್, ಬಜರಂಗದಳ ಮಂಜೇಶ್ವರ ಪ್ರಖಂಡ ಸಂಯೋಜಕರಾದ ಆನಂದ ಬಾಯಾರ್, ಬಜರಂಗದಳ ಮಂಜೇಶ್ವರ ಖಂಡ ಸಮಿತಿ ಸಂಯೋಜಕರಾದ ಅಭಿಲಾಶ್ ಬೆಂಗರೆ, ವಿ.ಹಿಂ.ಪ. ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಲ್ಲಂಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ದೀಪಾವಳಿ ಹಬ್ಬದ ಅಂಗವಾಗಿ ಗೋಪೂಜೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡದ ಮಾತೃ ಶಕ್ತಿ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಮೋಹನ್ ದಾಸ್ ಐಲ್ ಸ್ವಾಗತಿಸಿ, ಧಾರ್ಮಿಕ ಮುಂದಾಳು ದಿನಕರ್ ಬಿ.ಎಂ ಕಾರ್ಯಕ್ರಮ ನಿರೂಪಿಸಿ, ವಿ.ಹಿಂ. ಪ. ಜಿಲ್ಲಾ ಸಹ ಕಾರ್ಯದರ್ಶಿ ಯಾದವ್ ಕೀರ್ತೆಶ್ವರ ವಂದಿಸಿದರು.
ಬಳಿಕ ಭಜರಂಗದಳದ ನೂರಾರು ಕಾರ್ಯಕರ್ತರು ರಕ್ತದಾನಗೈಯುವ ಮೂಲಕ ಅಯೋಧ್ಯಾ ಬಲಿದಾನದಲ್ಲಿ ಮಡಿದ ವೀರ ಬಲಿದಾನಿಗಳಿಗೆ ನಮನ ಸಲ್ಲಿಸಿದರು.
ವರದಿ ಮತ್ತು ಚಿತ್ರಗಳು : ರತನ್ ಕುಮಾರ್ ಹೊಸಂಗಡಿ
