ಮಂಜೇಶ್ವರ:- ಭಾರತೀಯ ಸನಾತನ ಪರಂಪರೆ ಅತೀ ಪುರಾತನವಾದದ್ದು. ವಿವಿಧ ಜಾತಿ, ಮತ, ಪಂಥಗಳಿಗೆ ಆಶ್ರಯ ತಾಣವಾದ ಭಾರತದಂತಹ ದೇಶ ಈ ಜಗತ್ತಿನಲ್ಲಿ ಮತ್ತೊಂದಿಲ್ಲ ಎಂಬುವುದು ಅಷ್ಟೇ ಸತ್ಯ. ಅನಾದಿ ಕಾಲದಿಂದಲೂ ಪರಧರ್ಮ ಸಹಿಷ್ಣುಗಳಾದ ನಾವು ಎಲ್ಲಾ ಧರ್ಮಗಳನ್ನು ಸಮಾನ ರೀತಿಯಲ್ಲಿಯೇ ಕಂಡವರು, ಗೌರವಿಸಿದರು, ಮತ್ತು ಪ್ರೀತಿಸಿದವರು. ಇಲ್ಲಿರುವ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಕೆಲವು ನಿರ್ಧಿಷ್ಟ ಆಚರಣೆಗಳಿವೆ. ಅದನ್ನು ಪಾಲಿಸುವುದಕ್ಕೆ ಪ್ರತಿಯೊಬ್ಬ ಭಾರತೀಯನಿಗೂ ಪೂರ್ಣ ಹಕ್ಕಿದೆ. ಶಿಕ್ಷಣ ಸಂಸ್ಥೆ ಎಂಬುದು ಪ್ರತೀ ವಿದ್ಯಾರ್ಥಿಯೂ ಸಮಾನ ಎಂಬ ಭಾವ ನೀಡುವ ಪವಿತ್ರ ದೇಗುಲ. ಶಿಕ್ಷಣವೇ ಮೂಲಭೂತ ಆದ್ಯತೆಯಾಗಬೇಕಾದ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಹಿಜಾಬ್ ಕಿಚ್ಚು ರಾಜ್ಯದಿಂದ ಇಡಿದು ದೇಶವ್ಯಾಪಿ ಹಬ್ಬಿಕೊಳ್ಳುತ್ತಿದೆ. ಕೆಲವು ರಾಜಕೀಯ ವ್ಯಕ್ತಿಗಳು ಭವಿಷ್ಯದಲ್ಲಿ ಹೂವಾಗಿ ಅರಳಬೇಕಾದ ಮುಗ್ದ ಮಕ್ಕಳ ಮನಸ್ಸಿನಲ್ಲಿ ಮತೀಯತೆ ಎಂಬ ವಿಷ ಬೀಜವ ಬಿತ್ತಿ ದೇಶದ ಸೌಹಾರ್ದತೆಯನ್ನು ಕದಡುವುದಕ್ಕೆ ಯತ್ನಿಸುತ್ತಿದ್ದಾರೆ. ರಾಜಕೀಯ ಷಡ್ಯಂತ್ರವನ್ನು ರೂಪಿಸುತ್ತಾ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಸಮವಸ್ತ್ರ ಸಮಾನತೆಯ ಸಂಕೇತ. ಮಕ್ಕಳಲ್ಲಿ ಬಡವ ಬಲ್ಲಿದ ಮೇಲು, ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದಲೇ ಶಾಲೆಗಳಲ್ಲಿ ಸಮವಸ್ತ್ರವನ್ನು ಸರಕಾರ ಜಾರಿಗೊಳಿಸಿತ್ತು. ಆದರೆ ಒಂದು ಧರ್ಮದ ಪ್ರತೀಕವಾದ ಹಿಜಾಬ್ ನ್ನು ಧರಿಸುವುದು ನಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಹೋರಾಟ ಮಾಡುವುದು ಅರ್ಥ ರಹಿತವಾಗಿದೆ. ಈ ವಿಚಾರವನ್ನು ಬಳಸಿಕೊಂಡು ಕಾಣದ ಕೈಗಳು ಮರೆಯಲ್ಲಿ ತಮ್ಮ ಬೇಳೆ ಬೇಯಿಸುತ್ತಿದೆ. ಇವರೆಲ್ಲರ ಉದ್ದೇಶ ದೇಶದ ಪ್ರಗತಿ, ಏಕತೆ ಹಿತವಲ್ಲ ಎಂಬುದು ನಮಗಿಲ್ಲಿ ವ್ಯಕ್ತವಾಗುತ್ತದೆ.
ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅವಕಾಶವಿದ್ದರೂ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮಾನ ಎಂಬುದನ್ನು ನೆನಪಿನಲ್ಲಿಡಬೇಕು. ವಿದ್ಯಾರ್ಥಿಗಳ ಸುಂದರ ಭವಿಷ್ಯ ರೂಪುಗೊಳ್ಳಬೇಕಾದ ಸ್ಥಳಗಳಲ್ಲಿ ಧರ್ಮದ ಜ್ವಾಲೆ ಹರಿದಾಡುವಂತಾಗಿದೆ. ಇದನ್ನ ಎಲ್ಲಾ ವಿದ್ಯಾರ್ಥಿಗಳು ಪರಮಾರ್ಶೆಮಾಡಿ ಶಿಕ್ಷಣದ ಮೂಲಕ ನೈತಿಕತೆಯ ಹಕ್ಕನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಕಲಿಯಬೇಕು ಹೊರತು ಸಮಾನತೆಯ ಹಕ್ಕನ್ನು ಸಮವಸ್ತ್ರಗಳಿಗೆ ಸೀಮಿತವಾಗಿರಿಸಿ, "ಹಿಜಾಬ್" ಎಂಬುದನ್ನ ಬಿಟ್ಟು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬೆಳೆದು ವಿದ್ಯೆಯನ್ನ ಕಲಿತು ನಿಮ್ಮ ಜೀವನದ ಗುರಿಯನ್ನ ತಲುಪಿ ಎಂಬುದಾಗಿ ದೇಶದ ಸರ್ವಜನತೆಯ ಮಕ್ಕಳಲ್ಲಿ ವಿನಂತಿಸುತ್ತೇನೆ. ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಹಾಗೂ ಬಿಜೆಪಿ ಮಹಿಳಾಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆಯಾದ ಶ್ರೀಮತಿ ಅಶ್ವಿನಿ ಎಂ ಎಲ್ ಅಭಿಪ್ರಾಯಪಟ್ಟರು.
