ಕುಂಬಳೆ: ಸ್ಪೋರ್ಟ್ಸ್ ಬಟ್ಟೆಗಳನ್ನು ಖರೀದಿಸಿ ಡ್ರೆಸ್ ನ ಅಳತೆ ಅಂದಾಜಿಸಲು ಟ್ರೈಯಲ್ ರೂಮ್ ಗೆ ತೆರಳಿದ ಯುವತಿಯೋರ್ವೆಯ ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲೆತ್ನಿಸಿದ ಅಂಗಡಿ ನೌಕರನೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿ ಫೋಕ್ಸೋ ಕೇಸು ದಾಖಲಿಸಿದ್ದಾರೆ. ಆಸಿಫ್ (24) ಎಂಬಾತ ಬಂಧಿತ ಆರೋಪಿ. ಘಟನೆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.
ಬಂದ್ಯೋಡು ಪೇಟೆಯ ಹೃದಯ ಭಾಗದಲ್ಲಿರುವ ಸ್ಪೋರ್ಟ್ಸ್ ಡ್ರೆಸ್ ಅಂಗಡಿಯೊಂದಕ್ಕೆ ಕ್ರೀಡಾ ಬಟ್ಟೆ ಖರೀದಿಸಲೆಂದು ಯುವತಿಯೋರ್ವೆ ತನ್ನ ಸಂಬಂಧಿಕರೊಂದಿಗೆ ಬಂದಿದ್ದರು. ಈ ವೇಳೆ ಬಟ್ಟೆ ಖರೀದಿಸಿ ಅಳತೆ ನೋಡುವಂತೆ ಒತ್ತಾಯಿಸಿ ಅನ್ಯಕೋಮಿನ ಈ ಅಂಗಡಿ ನೌಕರ ರೂಮ್ ನೊಳಗೆ ಕಳುಹಿಸಿದ್ದ. ಈ ಸಂದರ್ಭ ತನ್ನ ಮೊಬೈಲ್ ಇರಿಸಿ ಯುವತಿ ಡ್ರೆಸ್ ಬದಲಾಯಿಸುವ ದೃಶ್ಯ ಸೆರೆಹಿಡಿಯಲೆತ್ನಿಸಿದ. ಅದನ್ನು ಗಮನಿಸಿದ ಯುವತಿಯು ಈ ಬಗ್ಗೆ ಪ್ರಶಿಸಿದ್ದು ಅಲ್ಲದೆ ಆರೋಪಿ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ನೀಡಲಾಯಿತು.
ಕಳೆದ ಅನೇಕ ವರ್ಷಗಳಿಂದ ಈ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತ ಇಂತಹ ಚಾಳಿಯನ್ನು ಹವ್ಯಾಸವಾಗಿರಿಸಿದ್ದ ಎನ್ನಲಾಗಿದೆ. ಯುವತಿಯರು ಡ್ರೆಸ್ ಬದಲಾಯಿಸುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಬಗ್ಗೆಯೂ ಈತನ ವಿರುದ್ಧ ಆರೋಪ ಕೇಳಿಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು , ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

