ದೇಶಾದ್ಯಂತ ಇಂದು ನಾಗರ ಪಂಚಮಿ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಿದ್ದು, ಇಂದು ಮುಂಜಾನೆಯಿಂದಲೇ ಕ್ಷೇತ್ರ, ಬನ, ತರವಾಡುಗಳ ನಾಗ ಸಾನಿಧ್ಯಗಳಲ್ಲಿ ವಿಶೇಷ ಅಭಿಷೇಕ, ಪೂಜೆ ಪುರಸ್ಕಾರಗಳು, ನಾಗ ತಂಬಿಲ ಗಳು ನಡೆಯಿತು. ಬೆಳಗಿನಿಂದ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಭಕ್ತರು ಭಕ್ತಿ ಶ್ರದ್ಧೆಯಿಂದ ನಾಗಾರಾಧನೆಯ ಕ್ಷೇತ್ರಗಳಿಗೆ ಆಗಮಿಸಿ, ಪೂಜೆಗಳನ್ನು ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಮಂಜೇಶ್ವರ
ಮಂಜೇಶ್ವರ : ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀ ಮತ್ ಅನಂತೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಕ್ಷೇತ್ರ ಮುಂಭಾಗದ ನಾಗನ ಕಟ್ಟೆಯಲ್ಲಿ ಇಂದು ಮುಂಜಾನೆಯಿಂದಲೇ ಶ್ರೀ ನಾಗದೇವರಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ, ಪೂಜೆಗಳು ನಡೆಯುತ್ತಿದ್ದು, ಸುರಿಯುವ ಮಳೆಯನ್ನು ಲೆಕ್ಕಿಸದೆ ನೂರಾರು ಮಂದಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು.ಮಧೂರು
ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಉಳಿಯತಡ್ಕದಲ್ಲಿರುವ ನಾಗ ಬನದಲ್ಲಿ ಶ್ರೀ ನಾಗದೇವರಿಗೆ ಅಭಿಷೇಕ, ವಿಶೇಷ ಪೂಜೆಗಳು ಶ್ರೀ ಕೃಷ್ಣ ಪ್ರಸಾದ್ ರವರ ಪೌರೋಹಿತ್ಯದಲ್ಲಿ ನಡೆಯಿತು.
ವರ್ಕಾಡಿ
ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಅಭಿಷೇಕಾದಿ ಪೂಜೆಗಳು ನಡೆಯಿತು.ಬಂಗ್ರ ಮಂಜೇಶ್ವರ
ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ಕ್ಷೇತ್ರದ ನಾಗನ ಕಟ್ಟೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ಚಂದ್ರ ಶ್ರೌತಿ ಯವರ ಆಚಾರ್ಯತ್ವದಲ್ಲಿ ಇಂದು ಬೆಳಗ್ಗೆ ಶ್ರೀ ನಾಗ ದೇವರಿಗೆ ಸೀಯಾಳ, ಹಾಲು, ಪಂಚಾಮೃತ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ, ವಿಶೇಷ ಪ್ರಾರ್ಥನೆ ಪೂಜೆ ನಡೆಯಿತು. ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡರು.
ಕುಕ್ಕಂಕೂಡ್ಲು
ಕಾಸರಗೋಡಿನ ವಿಶೇಷ ನಾಗನ ಗುಹಾ ಸಾನಿಧ್ಯ ವಿರುವ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಕುಕ್ಕಂಕೂಡ್ಲು ಇಲ್ಲಿ ನಾಗರಪಂಚಮಿ ಆಚರಣೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ನಡೆಯಿತು. ಹಾಲು ಅಭಿಷೇಕ, ಸೀಯಾಳ ಅಭಿಷೇಕ, ಹಾಲು ಪಾಯಸ ಸಮರ್ಪಣೆ, ನಾಗತಂಬಿಲ, ಮಹಾಪೂಜೆ ನಡೆಯಿತು. ಭಕ್ತ ಜನರು ಭಾಗವಹಿಸಿದರು.
ವರದಿ ಮತ್ತು ಚಿತ್ರಗಳು : ರತನ್ ಕುಮಾರ್ ಹೊಸಂಗಡಿ









