ಉಳ್ಳಾಲ: ಸಾವಿರಾರು ವಿದ್ಯಾರ್ಥಿಗಳು ಜ್ನಾನಾರ್ಜನೆಗೈಯುತ್ತಿರುವ ಶಾಲೆಯ ಆವರಣದ ಪಕ್ಕದಲ್ಲೇ ಬಾರ್&ರೆಸ್ಟೋರೆಂಟ್ ಒಂದು ದಿಢೀರನೆ ಹೆಡೆ ಎತ್ತಿದ್ದು ಬಾರನ್ನ ಸ್ಥಳಾಂತರಿಸುವಂತೆ ವಿದ್ಯಾರ್ಥಿಗಳು ಜಿಟಿ, ಜಿಟಿ ಮಳೆಯಲ್ಲಿ ಪಂಚಾಯತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಳೆಪುಣಿ ಗ್ರಾಮದ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾ ಕೇಂದ್ರದ ಆವರಣದ ಬಳಿಯಲ್ಲೇ ಬಾರ್&ರೆಸ್ಟೋರೆಂಟ್ ಒಂದು ನಿರ್ಮಾಣಗೊಂಡಿದ್ದು, ನಿಯಮಗಳನ್ನು ಗಾಳಿಗೆ ತೂರಿ ಈ ಬಾರಿಗೆ ಸ್ಥಳೀಯ ಪಂಚಾಯತ್ ಆಡಳಿತವು ನಿರಾಕ್ಷೇಪಣ ಪತ್ರ ನೀಡಿರುವುದಾಗಿ ಆರೋಪಗಳು ಕೇಳಿ ಬಂದಿವೆ. ಬಾರನ್ನು ಕೂಡಲೇ ಸ್ಥಳಾಂತರಿಸುವಂತೆ ಆಗ್ರಹಿಸಿ ಶಾರದಾ ವಿದ್ಯಾಗಣಪತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಬಾಳೆಪುಣಿ ಪಂಚಾಯತ್ಗೆ ಮುತ್ತಿಗೆ ಹಾಕಿ ಪಂಚಾಯತ್ ಅಧ್ಯಕ್ಷೆ ರಝಿಯಾ ಅವರಿಗೆ ಮನವಿ ಸಲ್ಲಿಸಿದರು.
ಶಾರದಾ ವಿದ್ಯಾಗಣಪತಿ ಶಾಲಾ ವಿದ್ಯಾರ್ಥಿನಿ ರಶ್ಮಿತಾ ಮಾತನಾಡಿ ಶಾಲಾ ಆವರಣದ ನೂರು ಮೀಟರ್ ವ್ಯಾಪ್ತಿಯೊಳಗಡೆ ಯಾವುದೇ ಮಾದಕ ಪದಾರ್ಥಗಳನ್ನ ಮಾರುವಂತಿಲ್ಲ ಎಂದು ಕಾನೂನು ಇದೆ.ಆದರೆ ಇಲ್ಲಿ ನಿಯಮಗಳನ್ನೆಲ್ಲ ಉಲ್ಲಂಘಿಸಿ ಬಾರ್ ನಿರ್ಮಿಸಲಾಗಿದ್ದು ಇದರಿಂದ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರೋದು ಖಂಡಿತ ಎಂದಳು.
ಶಾರದಾ ಗಣಪತಿ ವಿದ್ಯಾ ಕೇಂದ್ರದ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್ ಮಾತನಾಡಿ ಸರಕಾರದ ಮಾರ್ಗಸೂಚಿಗಳನ್ನ ಅವಗಣನೆ ಮಾಡಿ, ಸಾರ್ವಜನಿಕ ಆಕ್ಷೇಪಗಳಿಗೆ ಅವಕಾಶ ನೀಡದೆ ಪಂಚಾಯತ್ ಆಡಳಿತವು ನಿರ್ಮಾಣಕ್ಕೆ ತರಾತುರಿಯಲ್ಲಿ ನಿರಾಕ್ಷೇಪಣ ಪತ್ರ ನೀಡಿರುವುದು ಖಂಡನೀಯ. ಸರಕಾರದ ಮಾರ್ಗ ಸೂಚಿ ಪ್ರಕಾರ ಶಾಲಾ ಆವರಣದ 100 ಮೀಟರ್ ಅಂತರದೊಳಗೆ ಮದ್ಯದಂಗಡಿ ತೆರೆಯಳು ಅವಕಾಶ ಇರೋದಿಲ್ಲ.ಇಲ್ಲಿ ಶಾಲಾ ದ್ವಾರದ 53 ಮೀಟರ್ ಮತ್ತು ಶಾಲಾ ಆವರಣದ 13 ಮೀಟರ್ ಅಂತರದಲ್ಲೇ ಬಾರ್ ನಿರ್ಮಿಸಿ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಪಂಚಾಯತ್ ಅಧ್ಯಕ್ಷರು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಾರ್ ಸ್ಥಳಾಂತರಿಸದಿದ್ದರೆ ಮುಂದೆ ಪ್ರಜಾ ಪ್ರಭುತ್ವದಡಿಯ ಎಲ್ಲಾ ಹೋರಾಟಕ್ಕೂ ಶಾಲಾಡಳಿತ ತಯಾರಾಗಿದೆ ಎಂದರು.
ವಿವಾದಿತ ಬಾರ್&ರೆಸ್ಟೋರೆಂಟ್ ಮುಂದೆಯೂ ಜಮಾಯಿಸಿದ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರ ಹಾಕಿದರು.
