ಉಳ್ಳಾಲ: ರಾಜಕೀಯ ನೇತಾರ, ಶಿಕ್ಷಣಪ್ರೇಮಿ, ರಂಗಕಲಾವಿದ ಹಾಗೂ ಚಿತ್ರನಟನಾಗಿ ಗುರುತಿಸಿಕೊಂಡ ಕುತ್ತಾರಗುತ್ತು ಚಂದ್ರಹಾಸ ಅಡ್ಯಂತಾಯ ಇವರಿಗೆ ಅಭಿವಂದನಾ ಸಮಿತಿ ಉಳ್ಳಾಲ ಹಾಗೂ ಮಂಗಳೂರು ವತಿಯಿಂದ ಆಗಸ್ಟ್ 5 ಸಂಜೆ 4ಕ್ಕೆ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ಚಂದ್ರಾಮೃತ ಕಾರ್ಯಕ್ರಮ ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಜರಗಲಿದೆ ಎಂದು ಕುತ್ತಾರಗುತ್ತು ಚಂದ್ರಹಾಸ ಅಡ್ಯಂತಾಯ ಅಭಿವಂದನಾ ಸಮಿತಿ ಉಳ್ಳಾಲ ಹಾಗೂ ಮಂಗಳೂರು ಇದರ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಹೇಳಿದ್ದಾರೆ.
ತೊಕ್ಕೊಟ್ಟುವಿನ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದಲ್ಲಿ ಗುರುವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೊಟೇಲ್ ಉದ್ಯಮಿ, ರಾಜಕೀಯ ನೇತಾರ, ಧಾರ್ಮಿಕ ಮುಂದಾಳು , ಸಾಮಾಜಿಕ ಸೇವಾ ಕಾರ್ಯ, ಶಿಕ್ಷಣಪ್ರೇಮಿ, ಸಂಘಟಕ, ಸರ್ವಧರ್ಮ ಸಮನ್ವಯತೆಗಳೊಂದಿಗೆ ಜೀವ ನಡೆಸಿರುವ ಚಂದ್ರಹಾಸ ಅಡ್ಯಂತಾಯ ಇವರ ೭೫ನೇ ಹುಟ್ಟುಹಬ್ಬವನ್ನು ಸಾಮಾಜಿಕ ಸಾಧಕರನ್ನೊಳಗೊಂಡ ವ್ಯಕ್ತಿಗಳ ಒಗ್ಗೂಡುವಿಕೆಯಿಂದ ಅಭಿನಂದನಾ ಸಮಿತಿ ರಚಿಸಿ, ವಿವಿಧ ಸೇವಾ ಚಟುವಟಿಕೆಗಳ ಮೂಲಕ ಚಂದ್ರಾಮೃತವನ್ನು ನಡೆಸಲು ತೀರ್ಮಾನಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿ.ವಿಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ವಹಿಸಲಿದ್ದು, ನೀಲೇಶ್ವರ ಪದ್ಮನಾಭ ತಂತ್ರಿ ಉದ್ಘಾಟನೆ ನಡೆಸಿ ಮುಖ್ಯ ಅತಿಥಿಗಳಾಗಿ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್, ಸಂಸದ ನಳಿನ್ ಕಟೀಲ್, ಶ್ರೀದೇವಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಸದಾನಂದ ಶೆಟ್ಟಿ, ಭಾರತ ಸರಕಾರದ ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉದಯಚಂದ್ರ ಡಿ ಸುವರ್ಣ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮದ ದೇರಳಕಟ್ಟೆ-ಅಸೈಗೋಳಿ ಮಧ್ಯಭಾಗದ ತಿಬ್ಲೆಪದವು, ಪರಂಡೆಯಲ್ಲಿ ಸಂಸದರ ನಿಧಿಯಡಿ ಪ್ರಯಾಣಿಕರ ತಂಗುದಾಣಗಳ ನಿರ್ಮಾಣವಾಗಿದೆ. ಕಾಯಿಲೆ ಪೀಡಿತ, ಆಶ್ರಯವಿಲ್ಲದ, ಶಿಕ್ಷಣಕ್ಕೆ ತೊಂದರೆಯಾದ, ಮಗುವನ್ನು ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ಸಹಾಯ ತಾಂತ್ರಿಕ ಶಿಕ್ಷಣಕ್ಕೆ ಪೂರಕವಾಗಿ ಬಡ ವಿದ್ಯಾರ್ಥಿಗೆ ಲ್ಯಾಪ್ಟಾಪ್ , ಮೂವರು ಮಹಿಳಾ ಸಾಧಕಿಯರಿಗೆ ಗೌರವ ನೀಡಲಾಗುವುದು. ದೇರಳಕಟ್ಟೆಯ ಸೇವಾಶ್ರಮ ವಾಸಿಗಳಿಗೆ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನಂದಗೋಕುಲ ತಂಡದವರಿಂದ ನೃತ್ಯವೈಭವ, ಅಡ್ಯಂತಾಯರ ಬದುಕಿನ ಹೆಜ್ಜೆ ಸಾಕ್ಷ್ಯಚಿತ್ರ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೆ.ಟಿ ಸುವರ್ಣ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಜತೆ ಕಾರ್ಯದರ್ಶಿ ಆನಂದ್ ಶೆಟ್ಟಿ ಉಪಸ್ಥಿತರಿದ್ದರು.

