ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಆಡಳಿತವು ನವ ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯ ಸಲುವಾಗಿ ಬಿಜೆಪಿ ಮಂಗಳೂರು ಮಂಡಲ ವತಿಯಿಂದ 12 ಗ್ರಾಮದ 200 ದೈವ, ದೇವರ ಸೇವಕರನ್ನ ಗುರುತಿಸಿ ಗೌರವಾಭಿನಂದನೆ ಸಲ್ಲಿಸಲಾಯಿತು.
ಬೋಳಿಯಾರಿನ ಅಮರದೀಪ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.ಈ ವೇಳೆ ಅವರು ಇರಾ ಮತ್ತು ಕೊಣಾಜೆ ಬಿಜೆಪಿ ಮಹಾಶಕ್ತಿ ಕೇಂದ್ರದ 12 ಗ್ರಾಮದ 200 ಗೌರವಾನ್ವಿತ ದೈವ,ದೇವರ ಸೇವಕರಿಗೆ ಗೌರವಾಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಒಂಭತ್ತು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರಗಳಿಲ್ಲದೆ ಅಧಿಕಾರ ನಡೆಸಿದವರು ನರೇಂದ್ರ ಮೋದಿಜಿಯವರಾಗಿದ್ದಾರೆ. ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡದ ಸಾಧನೆಯನ್ನು ನರೇಂದ್ರ ಮೋದಿಜಿಯವರು ಕೇವಲ ಒಂಭತ್ತು ವರ್ಷಗಳಲ್ಲಿ ಮಾಡಿತೋರಿಸಿದ್ದಾರೆ.ದ.ಕ.ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ನೂರಾರು ಯೋಜನೆಗಳನ್ನು ನಾನು ಜಾರಿಗೆ ತಂದು ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಯಾವುದೇ ಕಾಮಗಾರಿಗಳಲ್ಲಿ ನಾನು ಭ್ರಷ್ಟಾಚಾರ ಎಸಗಿಲ್ಲವೆಂದು ಪುಣ್ಯ ಕ್ಷೇತ್ರಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧ ಎಂದರು.
ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಮ್, ಉಪಾಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.



