ಮಂಜೇಶ್ವರ: ನವರಾತ್ರಿ ಬಂತೆಂದರೆ ಸಾಕು ಕಾಸರಗೋಡು ಜಿಲ್ಲೆ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿವೇಷದ್ದೇ ಗದ್ದಲ. ಹಿಂದೆಲ್ಲ ಹುಲಿವೇಷ ಎಂದರೆ ಕರಾವಳಿ ಭಾಗ ಹೊರತುಪಡಿಸಿದರೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಯಾವಾಗ "ಉಳಿದವರು ಕಂಡಂತೆ", "ಗರುಡಗಮನ ವೃಷಭವಾಹನ" ಮೊದಲಾದ ಸಿನೆಮಾಗಳಲ್ಲಿ ಹುಲಿವೇಷವನ್ನು ಧಾರಾಳವಾಗಿ ತೋರಿಸಿದರೋ ಆವರೆಗೂ ಉಡುಪಿ ಕೃಷ್ಣ ಜನ್ಮಾಷ್ಟಮಿ, ಮಂಗಳೂರು ದಸರಾಗಳಲ್ಲಿ ಪ್ರಸಿದ್ಧವಾಗಿದ್ದ ‘ಪಿಲಿನಲಿಕೆ’ ರಾಜ್ಯದುದ್ದಗಲಕ್ಕೂ ಚಿರಪರಿಚಿತವಾಯಿತು. ಹುಲಿನರ್ತನ ಬೀಟ್, ಸ್ಟೆಪ್ ಗಳೆಲ್ಲ ಎಲ್ಲರಿಗೂ ಕರಗತವಾಯಿತು. ಹುಲಿ ವೇಷದ ನರ್ತನದ ಜೊತೆ "ಪಿಲಿನಲಿಕೆ" ಎಂಬ ಸ್ಪರ್ಧಾ ಕಾರ್ಯ ಮಂಗಳೂರಿನಲ್ಲಿ ನಡೆಸುವ ಮೂಲಕ ಹುಲಿವೇಷವು ಇಡೀ ಜಗತ್ ಪ್ರಸಿದ್ದಿ ಪಡೆಯಿತು. ಇದೀಗ ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ "ಪಿಲಿನಲಿಕೆ" ನಡೆಸಲು ಮಂಜೇಶ್ವರದ ಉದ್ಯಾವರ ಗುತ್ತು ಎಂಬಲ್ಲಿ ವೇದಿಕೆ ನಿರ್ಮಾಣವಾಗಿದೆ.
ಕಳೆದ 18 ವರ್ಷಗಳ ಹಿಂದೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ತಾಯಿಯ ಅನುಗ್ರಹದೊಂದಿಗೆ ಶ್ರೀ ದುರ್ಗಾ ಹುಲಿ ಗುತ್ತು ಚೌಕಿ ಮಂಜೇಶ್ವರ ಅಸ್ತಿತ್ವಕ್ಕೆ ಬಂದು ಮಂಜೇಶ್ವರ ಶ್ರೀ ಮತ್ ಅನಂತೇಶ್ವರ ದೇವಸ್ಥಾನದಲ್ಲಿ ಜರಗುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವಿಸರ್ಜನಾ ಮೆರವಣಿಗೆ ವೇಳೆ ತಮ್ಮ ಹುಲಿ ವೇಷದ ಸೇವೆಯನ್ನು ತಾಯಿ ಶಾರದೆಗೆ ಸಮರ್ಪಿಸಿ, ಜಳಕಗೈದು ಕೃತಾರ್ಥರಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ನಡೆಯುವ ಪಿಲಿನಲಿಕೆಯನ್ನು ಮಂಜೇಶ್ವರದಲ್ಲಿ ನಡೆಸಬೇಕೆಂಬ ಹಂಬಲ ದುರ್ಗಾ ಹುಲಿಯದ್ದಾಗಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದ್ದು, ಕಾಸರಗೋಡು ಜಿಲ್ಲೆಯಲ್ಲಿರುವ ಎಲ್ಲಾ ಹುಲಿವೇಷ ತಂಡವನ್ನು ಒಂದೇ ವೇದಿಕೆಗೆ ಆಹ್ವಾನಿಸಿ, ಹುಲಿವೇಷದಲ್ಲಿ ಪಳಗಿದ ಹಿರಿಯರನ್ನು ತೀರ್ಪುಗಾರರನ್ನಾಗಿಸಿ, ಪ್ರದರ್ಶನ ನಡೆಸಿ, ಬಹುಮಾನ ನೀಡುವ ನಿಟ್ಟಿನಲ್ಲಿ ದುರ್ಗಾ ಹುಲಿ ಗುತ್ತು ಚೌಕಿ ಮಂಜೇಶ್ವರ ಸಂಸ್ಥೆಯು ಕಾಸರಗೋಡು ಜಿಲ್ಲಾ ಮಟ್ಟದ "ಶ್ರೀ ದುರ್ಗ ಚೌಕಿದ ಪಿಲಿನಲಿಕೆ" ಎಂಬ ಶೀರ್ಷಿಕೆಯಡಿ ಸ್ಪರ್ಧೆಯನ್ನು ಆಯೋಜಿಸಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಪಿಲಿನಲಿಕೆಯ ಲೋಗೋ ಅನಾವರಣ ಕಾರ್ಯಕ್ರಮ ಉದ್ಯಾವರ ಗುತ್ತು ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ನಿನ್ನೆ ರಾತ್ರಿ ನಡೆಯಿತು. ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡ ರವರು ಲೋಗೋ ವನ್ನು ಅನಾವರಣಗೊಳಿಸಿ, ಪ್ರಪ್ರಥಮವಾಗಿ ನಡೆಯುವ ಜಿಲ್ಲಾ ಮಟ್ಟದ ಪಿಲಿನಲಿಕೆಗೆ ಶುಭ ಹಾರೈಸಿದರು. ಈ ವೇಳೆ ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಯಾದವ ಬಡಾಜೆ, ಕನಿಲ ಶ್ರೀ ಭಗವತೀ ಕ್ಷೇತ್ರದ ಗುರಿಕಾರರಾದ ಪ್ರಸಾದ್ ಗುರಿಕಾರ ಉದ್ಯಾವರ ಗುತ್ತು, ಶ್ರೀ ಕೋಮರಾಯ ವ್ಯಾಘ್ರಚಾಮುಂಡೇಶ್ವರಿ ಕ್ಷೇತ್ರ ಬಲಿಲೇರಿಯಾದ ಹಿರಿಯರಾದ ಶ್ರೀ ಸುಕುಮಾರ ಮಂಜೇಶ್ವರ, ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಪ್ರಧಾನ ಅರ್ಚಕರಾದ ಐತಪ್ಪ ಉದ್ಯಾವರ ಗುತ್ತು, ತಿಮ್ಮಪ್ಪ ಉದ್ಯಾವರ ಗುತ್ತು, ಮಂದಿರದ ಅಧ್ಯಕ್ಷರಾದ ಉಮೇಶ್ ಉದ್ಯಾವರ ಗುತ್ತು, ಪಿಲಿನಲಿಕೆಯ ಅಧ್ಯಕ್ಷ ಹರೀಶ್ ಚೌಕಿ, ದುರ್ಗಾ ಹುಲಿಯ ಅಧ್ಯಕ್ಷ ನಿತಿನ್ ಚೌಕಿ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. "ಶ್ರೀ ದುರ್ಗಾ ಚೌಕಿದ ಪಿಲಿ ನಲಿಕೆ" ಸ್ಪರ್ಧೆಯು ಅಕ್ಟೋಬರ್ 22 ರಂದು ಆದಿತ್ಯವಾರ ಅಪರಾಹ್ನ ನಡೆಯಲಿದ್ದು, ಈ ಸ್ಪರ್ಧೆಯು ಕಾಸರಗೋಡು ಜಿಲ್ಲಾ ಮಟ್ಟದ ಸ್ಪರ್ಧೆಯಾಗಿರುತ್ತದೆ. ಪ್ರಥಮ ಬಹುಮಾನ: 1,1111 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ: 60666 ಹಾಗೂ ಶಾಶ್ವತ ಫಲಕ, ಮತ್ತು ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ಬಹುಮಾನವಾಗಿ 15,000 ರೂಪಾಯಿ ಮೊತ್ತ ಹಾಗೂ ಫಲಕ ನೀಡಲಾಗುವುದು. ಜಿಲ್ಲೆಯಲ್ಲಿರುವ ಎಲ್ಲಾ ಹುಲಿ ವೇಷ ತಂಡಗಳಿಗೆ ಈ ಸ್ಪರ್ಧೆಗೆ ಮುಕ್ತವಾಗಿ ಸ್ಪರ್ಧಿಸಬಹುದಾಗಿದೆ. ಹುಲಿವೇಷದಲ್ಲಿ ಭಾಗವಹಿಸುವ ತಂಡಗಳು ಊರಿನ ಸಾಂಪ್ರದಾಯಿಕ ಪಾವಾಳ ಹೆಜ್ಜೆಗೆ ಆದ್ಯತೆ ನೀಡಲಾಗಿದ್ದು, ತಂಡದಲ್ಲಿ ಸ್ಥಳೀಯ ವೇಷದಾರಿಗಳಾಗಿರಬೇಕು. ತಂಡದಲ್ಲಿ 15 ಹುಲಿವೇಷ ದಾರಿಗಳಿರಬೇಕು. ಸ್ಪರ್ಧೆಯಲ್ಲಿ ಕಪ್ಪು ಹುಲಿಗೆ ವಿಶೇಷ ಮನ್ನಣೆ ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಕ್ಕೆ ಕೇವಲ 20 ನಿಮಿಷದ ಕಾಲಾವಕಾಶ ನೀಡಲಾಗುವುದು. ಅಕ್ಕಿ ಮುಡಿಯನ್ನು ಆಯೋಜಕರು ನೀಡಲಿರುವರು. ಹುಲಿ ವೇಷಗಳಿಗೆ ನೀಡುವ ಅಂಕಗಳು ಈ ಕೆಳಗಿನಂತಿವೆ. ಹುಲಿ ವೇಷ ಪಾವಳ ಹೆಜ್ಜೆಗೆ 10 ಅಂಕ, ಹುಲಿವೇಷ ತಂಡದ ತಾಸೆಗೆ 10 ಅಂಕ, ಹುಲಿ ವೇಷ ತಂಡದ ಟೊಪ್ಪಿ + ಚಡ್ಡಿಗೆ 10 ಅಂಕ, ಹುಲಿ ವೇಷ ತಂಡದವರು ಅಕ್ಕಿ ಮುಡಿ ಬಿಸಾಡುವುದಕ್ಕೆ 10 ಅಂಕ, ಜಂಡೆ ತಿರುಗಿಸುವುದಕ್ಕೆ 10 ಅಂಕ, ಹುಲಿ ವೇಷ ತಂಡ ಬಣ್ಣಗಾರಿಕೆಗೆ 10 ಅಂಕ, ಧರಣಿ ಮಂಡಲಕ್ಕೆ 10 ಅಂಕ, ವೈಯುಕ್ತಿಕ 10 ಅಂಕ, ತಂಡದ ಶಿಸ್ತುವಿಗೆ 10 ಅಂಕ, ಒಟ್ಟು ಅಭಿಪ್ರಾಯಕ್ಕೆ 10 ಅಂಕ ಸೇರಿ ಒಟ್ಟು 100 ಅಂಕದ ಸ್ಪರ್ಧೆ ಇದಾಗಿರುತ್ತದೆ. ಈ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯವರಿಗೆ ಮಾತ್ರ ಆದ್ಯತೆ. ಹುಲಿವೇಷ ತಂಡದಲ್ಲಿ ಎಲ್ಲಾ ತಂಡಗಳಲ್ಲಿ ಒಳ್ಳೆಯ ಸವ್ಯಸಾಚಿ, ಆಲ್ ರೌಂಡರ್, ಪಿಲಿನಲಿಕೆ ವಿಶೇಷ ಬಹುಮಾನವಿದೆ. ಒಂದು ತಂಡದಲ್ಲಿ ಭಾಗವಹಿಸಿದ ವೇಷಧಾರಿಗಳು ಹಾಗೂ ತಾಸೆಯವರು ಇನ್ನೊಂದು ತಂಡದಲ್ಲಿ ಭಾಗವಹಿಸುವ ಅವಕಾಶ ಇಲ್ಲ. ಸ್ಪರ್ಧೆಗೆ ಬರುವಾಗ ವೇಷಧಾರಿಗಳ ಆಧಾರ್ ಕಾರ್ಡ್ ಒರ್ಜಿನಲ್ ಪ್ರತಿ ಕಡ್ಡಾಯವಾಗಿ ತರತಕ್ಕದ್ದು. ಅನುಚಿತ ವರ್ತನೆ ತೋರಿದ ತಂಡವನ್ನು ಅನರ್ಹಗೊಳಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮವು ಸಂಪೂರ್ಣ ಡಿಜಿಟಲ್ ತಂತ್ರಜ್ಞಾನ ಅಳವಡಿಸಿ, ಯುಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರವಾಗಲಿದ್ದು, ಸ್ಪರ್ಧೆ ನಡೆಯುವ ಪರಿಸರವು ಪೊಲೀಸ್ ಇಲಾಖೆಯ ಆದೇಶದಂತೆ ಸಿ.ಸಿ ಟಿವಿಯ ನಿರೀಕ್ಷಣೆಯಲ್ಲಿರುತ್ತದೆ. ಸ್ಪರ್ಧೆ ನಡೆಯುವ ವೇದಿಕೆಯ ಸುತ್ತಾ ಸಾರ್ವಜನಿಕರಿಗೆ ಕುಳಿತುಕೊಂಡು ನೋಡಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಮಹಿಳೆಯರಿಗೂ ಕೂಡಾ ವ್ಯವಸ್ಥೆ ಕಲ್ಪಿಸಲಾಗುವುದು. ಎಂದು ಶ್ರೀ ದುರ್ಗಾ ಚೌಕಿದ ಪಿಲಿನಲಿಕೆಯ ಅಧ್ಯಕ್ಷ ಹರೀಶ್ ಚೌಕಿ ಮಾಹಿತಿ ನೀಡಿದರು.

