ಮಂಗಳೂರು : ಉಳ್ಳಾಲ ತಾಲೂಕಿನ ಪಾವೂರು ಗ್ರಾಮ ಪಂಚಾಯತ್’ನ 2ನೇ ಅವಧಿಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಒಲಿದಿದೆ. ಉಪಾಧ್ಯಕ್ಷರಾಗಿ SDPI ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಟೈ ಆಗುವ ಮೂಲಕ ತೀವ್ರ ಕುತೂಹಲ ಕೆರಳಿಸಿದ ಪಾವೂರು ಗ್ರಾಮ ಪಂಚಾಯಿತಿ ಅದೃಷ್ಟ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ ಡಿಪಿಐ ತೆಕ್ಕೆಗೆ ಹೋಗಿದೆ.
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಾತ್ಕೋ ಮಜೀದ್ ಮತ್ತು ಉಪಾಧ್ಯಕ್ಷರಾಗಿ ಎಸ್ ಡಿಪಿಐ ಬೆಂಬಲಿತೆ ಮೆಹರುನ್ನಿಸಾ ಆಯ್ಕೆಯಾದರು.
15 ಸದಸ್ಯ ಬಲದ ಪಾವೂರು ಗ್ರಾಮ ಪಂಚಾಯಿತಿಯಲ್ಲಿ ಎಸ್ ಡಿಪಿಐ 6, ಕಾಂಗ್ರೆಸ್ 5, ಬಿಜೆಪಿ 2 ಮತ್ತು ಎರಡು ಸ್ಥಾನವನ್ನು ಪಕ್ಷೇತರರು ಹೊಂದಿದ್ದಾರೆ.
ಕಳೆದ ಬಾರಿ ಪಕ್ಷೇತರರ ಬೆಂಬಲದೊಂದಿಗೆ ಎಸ್ ಡಿಪಿಐ ಅಧಿಕಾರ ನಡೆಸಿತ್ತು.
ಈ ಬಾರಿ ಎಸ್ ಡಿಪಿಐ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ವಲೇರಿಯನ್ ಡಿಸೋಜ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೆಹರುನ್ನಿಸಾ, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸಾತ್ಕೋ ಮಜೀದ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರವಿಕಲಾ ಸ್ಪರ್ಧಿಸಿದ್ದರು. ಚುನಾವಣೆ ನಡೆದಾಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಏಳು ಮತಗಳನ್ನು ಪಡೆದಿದ್ದು ಒಂದು ಮತ ಅಸಿಂಧುಗೊಂಡಿತು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳೂ ಏಳು ಮತಗಳನ್ನು ಪಡೆದರೆ ಒಬ್ಬರು ಮತ ಚಲಾಯಿಸದ ಕಾರಣ ಸಮ ಬಲಗೊಂಡಿದ್ದು ಇದರಿಂದಾಗಿ ಅದೃಷ್ಟ ಚೀಟಿ ಎತ್ತಲಾಯಿತು. .
ಕಾಂಗ್ರೆಸ್ ಗೆ ಬೆಂಬಲ ನೀಡಿದ್ದು ಯಾರು?
ಪಂಚಾಯಿತಿಯಲ್ಲಿ ಕಾಂಗ್ರೆಸ್ ಐದು ಸ್ಥಾನ ಹೊಂದಿದೆ. ಕಳೆದ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಕಾಂಗ್ರೆಸ್ ಐದು ಸ್ಥಾನಗಳನ್ನು ಮಾತ್ರ ಪಡೆದಿದ್ದರೆ, ಈ ಬಾರಿ ಏಳು ಸ್ಥಾನ ಪಡೆದಿದೆ. ಓರ್ವ ಸದಸ್ಯ ಎಸ್ ಡಿಪಿಐ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ರೈಟ್ ಚಿನ್ಹೆ ಹಾಕಿದರೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ ಗುಣಿಸು ಚಿನ್ಹೆ ಹಾಕಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಓರ್ವ ಸದಸ್ಯ ಮತವನ್ನೇ ಚಲಾಯಿಸದೆ ತಟಸ್ಥರಾಗಿದ್ದಾರೆ.
ಕಾಂಗ್ರೆಸ್ ಗೆ ಎರಡು ಹೆಚ್ಚುವರಿ ಮತಗಳು ಬಂದಿದ್ದು ಬಿಜೆಪಿ ಅಭ್ಯರ್ಥಿಗಳು ಬೆಂಬಲ ನೀಡಿದರೇ? ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಇಬ್ಬರಿಗೂ ಮತ ಹಾಕಿದವರಾರು? ಉಪಾಧ್ಯಕ್ಷ ಸ್ಥಾನದಲ್ಲಿ ಮತ ಚಲಾಯಿಸದವರು ಯಾರು ಎನ್ನುವ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.

