ಕಾಸರಗೋಡು: ಇತಿಹಾಸ ಪ್ರಸಿದ್ಧ ಕೇರಳದ ಅನಂತಪುರ ದೇವಸ್ಥಾನದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಮೂಡಿತ್ತು. ಎಲ್ಲರೂ ದೇವರಲ್ಲಿ ಇನ್ನೊಂದು ಬಬಿಯಾದ ಪ್ರತಿಬಿಂಬವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು.
ಕುಂಬಳೆ ಸಮೀಪದ ಅನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಬ್ರಿಟೀಷರ ಗುಂಡೇಟಿಗೆ ಬಲಿಯಾಗಿದ್ದ ಮೊಸಳೆಯ ಬಳಿಕ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿತ್ತು. ದೇವಸ್ಥಾನದ ಕಲ್ಯಾಣಿಯಲ್ಲಿ ದೇವಮೊಸಳೆ ಅಂತಾನೆ ಇತಿಹಾಸ ಹೊಂದಿದ್ದ ಈ ಬಬಿಯಾ ಎನ್ನುವ ಮೊಸಳೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿತ್ತು. ಆದರೆ, 2022 ರ ಅಕ್ಟೋಬರ್ 9 ರಂದು ಇದು ಮೃತಪಟ್ಟಿತ್ತು
ಇದೀಗ ಭಕ್ತಾದಿಗಳ ಆಸೆಯಂತೆ ಅನಂತಪುರ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಕಾಣ ಸಿಕ್ಕಿದೆ. ಒಂದು ವಾರದ ಹಿಂದೆ ಭಕ್ತಾದಿಯೊಬ್ಬರು ಮೊಸಳೆ ಕಂಡಂತೆ ಆಯಿತು. ಅಂದರೂ ಸಾಕ್ಷಾಧಾರ ಇಲ್ಲದಿದ್ದರಿಂದ ನಂಬಲು ಅಸಾಧ್ಯವಾಗಿತ್ತು. ಇದೀಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡಿಸಿದೆ. ದೇವರ ಪ್ರತಿ ಬಿಂಬ ಎಂದೇ ಹೇಳಲ್ಪಡುತ್ತಿರುವ ಮೊಸಳೆ ಈಗ ಕಾಣಿಸುತ್ತಿರುವುದು ಭಕ್ತಾದಿಗಳಲ್ಲಿ ಖುಷಿ ತಂದಿದೆ. ದೇವರ ಪವಾಡವೋ, ಕಾರಣಿಕ ಶಕ್ತಿಯೋ ಎಂಬಂತೆ ಕ್ಷೇತ್ರದ ಕೆರೆಯಲ್ಲಿ ಮೊಸಳೆ ಪತ್ತೆಯಾಗಿದ್ದು ಕ್ಷೇತ್ರಕ್ಕೆ ಮತ್ತಷ್ಟು ಆಸ್ತಿಕರನ್ನು ಆಹ್ವಾನಿಸಲಿದೆ.
