ಪೆರ್ಲ : ಬಸ್ ಚಾಲಕ ವೃತ್ತಿಯಲ್ಲಿದ್ದ ಮಧ್ಯವಯಸ್ಕರೋರ್ವರು ವಿಷ ಸೇವಿಸಿ ಆಸ್ವಸ್ಥ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಪೆರ್ಲ ಬಜಕೂಡ್ಲು ನಿವಾಸಿ ಗಿರಿಧರ ಪೂಜಾರಿ (56) ಎಂದು ಗುರುತಿಸಲಾಗಿದೆ.ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಪೆರ್ಲ ಅಯ್ಯಪ್ಪ ಮಂದಿರದ ಬಳಿ ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಇವರನ್ನು ತಕ್ಷಣ ಊರವರು ಕಾಸರಗೋಡು ಖಾಸಗೀ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಸಾವು ಸಂಭವಿಸಿದೆ.
ವೃತ್ತಿಯಲ್ಲಿ ಬಸ್ ಚಾಲಕರಾಗಿದ್ದ ಇವರು ಪೆರ್ಲ ಪೇಟೆಯಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಅಯ್ಯಪ್ಪ ಭಕ್ತರಾಗಿದ್ದ ಇವರು ಹಲವಾರು ವರ್ಷಗಳಿಂದ ಶಬರಿಮಲೆ ಯಾತ್ರೆಗೈಯುತ್ತಿದ್ದು ಗುರುಸ್ವಾಮಿಗಳಾಗಿ ಹಲವಾರು ಅಯ್ಯಪ್ಪ ಭಕ್ತರನ್ನು ವರ್ಷಂಪ್ರತಿ ಶಬರಿಮಲೆಗೆ ಕರೆದೊಯ್ಯುತ್ತಿದ್ದರು. ಪೆರ್ಲ ಅಯ್ಯಪ್ಪ ಮಂದಿರದ ಗುರುಸ್ವಾಮಿಯಾಗಿಯೂ, ವಿಶ್ವಹಿಂದೂ ಪರಿಷತ್ ಸಮಿತಿ ಪದಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಯಶೋದ (ಸೇರಾಜೆ ಅಂಗನವಾಡಿ ಅಧ್ಯಾಪಕಿ), ಮಕ್ಕಳಾದ ಅಭಿರಾಜ್,ಅನುಷಾ ಮತ್ತು ಸಹೋದರ,ಸಹೋದರಿಯನ್ನು ಅಗಲಿದ್ದಾರೆ.

