ಗೆಲ್ಲಲು 177 ರನ್ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್ 4 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ನಾಯಕ ಏಯ್ಡನ್ ಮಾರ್ಕ್ರಮ್ ಕೇವಲ 4 ರನ್ಗಳಿಸಿ ಆರ್ಶದೀಪ್ ಸಿಂಗ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಸ್ಟಬ್ಸ್-ಡಿ ಕಾಕ್ ಆಸರೆ: ಕೇವಲ 12 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರನೇ ವಿಕೆಟ್ಗೆ ಕ್ವಿಂಟನ್ ಡಿ ಕಾಕ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಕೇವಲ 38 ಎಸೆತಗಳಲ್ಲಿ 58 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಟಬ್ಸ್ 21 ಎಸೆತಗಳನ್ನು ಎದುರಿಸಿ 31 ರನ್ ಸಿಡಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಆಟವಾಡಿದ ಕ್ವಿಂಟನ್ ಡಿ ಕಾಕ್ 31 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 39 ರನ್ ಬಾರಿಸಿ ಆರ್ಶದೀಪ್ಗೆ ಎರಡನೇ ಬಲಿಯಾದರು.
ಗುಡುಗಿದ ಕ್ಲಾಸೇನ್ : ಸ್ಟಬ್ಸ್ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ಹೆನ್ರಿಚ್ ಕ್ಲಾಸೇನ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆರಂಭದಿಂದಲೇ ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಮೇಲೆ ಕ್ಲಾಸೇನ್ ಸವಾರಿ ಮಾಡಿದರು. ಅದರಲ್ಲೂ 15ನೇ ಓವರ್ ಎಸೆತದ ಅಕ್ಷರ್ ಪಟೇಲ್ ಒಂದೇ ಓವರ್ನಲ್ಲಿ ಕ್ಲಾಸೇನ್ ತಲಾ 2 ಸಿಕ್ಸರ್ ಹಾಗೂ ಬೌಂಡರಿ ಸಹಿತ 24 ರನ್ ಬಾರಿಸಿ ಪಂದ್ಯ ದಕ್ಷಿಣ ಆಫ್ರಿಕಾ ಪರ ವಾಲುವಂತೆ ಮಾಡಿದರು. ಕ್ಲಾಸೇನ್ ಕೇವಲ 23 ಎಸೆತಗಳನ್ನು ಎದುರಿಸಿ ಆಕರ್ಷಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಕ್ಲಾಸೇನ್ 27 ಎಸೆತಗಳನ್ನು 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

.jpeg)
