ಬೆಂಗಳೂರು(ಜು.11) ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನಗೆದ್ದಿದ್ದ ಖ್ಯಾತ ನಿರೂಪಕಿ ಅಪರ್ಣ ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣ ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಸಂಜೆ ಅಪರ್ಣ ಬನಶಂಕರಿ ಸೆಕೆಂಡ್ ಸ್ಟೇಜ್ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ. ಅಪರ್ಣಾ ಸಾವು ಕನ್ನಡಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿನಿಮಾ, ಟಿವಿ, ಸಾಹಿತ್ಯ ಲೋಕ ಸೇರಿದಂತೆ ಹಲವು ದಿಗ್ಗಜರು ಅಪರ್ಣಾ ಸಾವಿನ ಸುದ್ದಿಗೆ ಆಘಾತ ವ್ಯಕ್ತಪಡಿಸಿದ್ದಾರೆ.
1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದ ಅಪರ್ಣಾ ನಂತರ ಇನ್ಸ್ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಎಲ್ಲರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು.
90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು. ನಂತರ ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998 ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದ ಅಪರ್ಣಾ ರಿಯಾಲಿಟಿ ಶೋಗಳಲ್ಲೂ ಸೈ ಎನಿಸಿಕೊಂಡಿದ್ರು. ಇನ್ನು 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಹಾಸ್ಯ ನಟಿಯಾಗಿಯೂ ಜನರ ಮನಗೆದ್ದಿದ್ದರು.
ಬಹುಮುಖ ಪ್ರತಿಭೆಯ ಅಪರ್ಣಾ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಓದುಗರಿಗೂ ಹತ್ತಿರವಾಗಿದ್ದರು. ಅಪರ್ಣಾ ತಂದೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮೊದಲ ಮದುವೆಯಿಂದ ವಿಚ್ಚೇದನ ಪಡೆದಿದ್ದ ಅಪರ್ಣಾ, ಖ್ಯಾತ ಲೇಖಕ ನಾಗರಾಜ ವಸ್ತಾರೆ ವರಿಸಿದ್ದರು.

