ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಮಂಜೇಶ್ವರ ಕಲಾ ತಂಡದ 'ಯಕ್ಷ ಶತಕ' ಮೇ 25ಕ್ಕೆ
ಮೀಯಪದವು, ಮೇ 18: ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಮಂಜೇಶ್ವರ ಕಲಾ ತಂಡದ 'ಯಕ್ಷ ಶತಕ' ಕಾರ್ಯಕ್ರಮವು ಮೇ 25 ರಂದು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ, ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು, ಶ್ರೀ ಬೆನಕ ಯಕ್ಷ ಕಲಾ ವೇದಿಕೆ ಪೈವಳಿಕೆ ಸಮಾರಂಭಕ್ಕೆ ಸಹಕಾರ ನೀಡಲಿದೆ.
ಬೆಳಿಗ್ಗೆ 10ರಿಂದ ಯಕ್ಷಶತಕ ಉದ್ಘಾಟನೆ 'ಅಬ್ಬರ ತಾಳ' ಜರಗಲಿದ್ದು ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಮಜಿಬೈಲು ಕ್ಷೇತ್ರದ ಮೊಕೇಸರ ಗೋಪಾಲಕೃಷ್ಣ ನಾವಡ ದೀಪ ಪ್ರಜ್ವಲನೆಗೈಯಲಿದ್ದಾರೆ. ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತಸರ ವಸಂತಭಟ್, ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಅಧ್ಯಕ್ಷ ಗಣೇಶ ನಾವಡ ಉಪಸ್ಥಿತರಿರುವರು.
10.30ರಿಂದ ಶಾಸ್ತ್ರೀಯ ಸಂಗೀತ ವಿದುಷಿ ಶಿಲ್ಪಾಭಟ್ ಮತ್ತು ಶಿಷ್ಠೆಯರಾದ ಮಮತಾ ನಾವಡ, ವಿಷ್ಣು ಪ್ರಿಯ ನಾವಡ ಅವರಿಂದ 11.30ಕ್ಕೆ ಗೌರವಾರ್ಪಣೆ ಸಂಗೀತ ಗುರುಗಳಾದ ವಿದುಷಿ ಶಿಲ್ಪಾ ಭಟ್, ಯಕ್ಷಗಾನ ಹಿಮ್ಮೇಳ ಗುರುಗಳಾದ ಶೇಣಿ ಸುಬ್ರಹ್ಮಣ್ಯ ಭಟ್ ಉಳುವಾನ ಅವರಿಗೆ. 11.45ರಿಂದ ತಾಳಮದ್ದಳೆ ವಾಮನ ಚರಿತ್ರೆ, ಅಪರಾಹ್ನ 2.30ರಿಂದ ಯಕ್ಷಗಾನ ಬಯಲಾಟ ವೀರ ತರಣಿಸೇನ ಜರಗಲಿದೆ.
ಸಂಜೆ 5.30ರಿಂದ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕ ಮಾಡ ಕ್ಷೇತ್ರದ ಅಧ್ಯಕ್ಷ ಡಾ| ಶ್ರೀಧರ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು ಮುಖ್ಯ ಅತಿಥಿಗಳಾಗಿ ನೇಪಾಳ ಪಶುಪತಿ ದೇವಸ್ಥಾನದ ನಿವೃತ್ತ ಅರ್ಚಕ ರಘುರಾಮ ಕಾರಂತ ಪದ್ಯಾಣ, ಕ.ಸಾ.ಪ. ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯಪ್ರಕಾಶ ನಾರಾಯಣ, ವಾಸ್ತು ತಜ್ಞ ಜ್ಯೋತಿಷಿ ಎಂ. ಛತ್ರಪತಿ ಶಿವಾಜಿ, ಸತೀಶ ಅಡಪ ಭಾಗವಹಿಸಲಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದ ಮಾಧವ ನಾವಡ, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ನಾಯಕ್ ಅವರಿಗೆ ಸಮ್ಮಾನ ಜರಗಲಿದೆ.

