ಮುಂಬೈ: ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ಎದುರು ಫೈನಲ್ನಲ್ಲಿ 52 ರನ್ ಅಂತರದ ಗೆಲುವು ಸಾಧಿಸಿದ ಭಾರತ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದು ಭಾರತ ಮಹಿಳಾ ಕ್ರಿಕೆಟ್ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆ ಎನಿಸಿಕೊಂಡಿದೆ.
ಗೆಲ್ಲಲು 299 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ಗೆ ನಾಯಕಿ ಲಾರಾ ವೋಲ್ವಾರ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ 9.3 ಓವರ್ಗಳಲ್ಲಿ 51 ರನ್ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಮನ್ಜೋತ್ ಕೌರ್ ಯಶಸ್ವಿಯಾದರು. ಇಲ್ಲದ ರನ್ ಕದಿಯಲು ಹೋಗಿ ತಜ್ಮಿನ್ ರನೌಟ್ ಆದರು. ಇದರ ಬೆನ್ನಲ್ಲೇ ಅನ್ನೇಕೆ ಬಾಷ್ ಆರು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಶ್ರೀಚರಣಿಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಲಾರಾ ವೋಲ್ವಾರ್ಟ್ ಹಾಗೂ ಲುಸ್ 52 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

