ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಾತೆಯರಿಗೆ ಬಲುದೊಡ್ಡ ಜವಾಬ್ದಾರಿ - ಸಾದ್ವಿ ಮಾತಾನಂದಮಯಿ
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮಾತೃ ಸಮಾವೇಶಬದಿಯಡ್ಕ: ಉತ್ತಮ ಸಮಾಜದ ನಿರ್ಮಾಣದಲ್ಲಿ ಮಾತೆಯರಿಗೆ ಬಲುದೊಡ್ಡ ಜವಾಬ್ದಾರಿಯಿದೆ. ಪರಿಸರದ ಬಂಧುಗಳ ಮುಗ್ದತೆ, ನಿಷ್ಟೆ, ಸೇವಾ ಮನೋಭಾವವಿದ್ದರೆ ಭಗವಂತನ ಅನುಗ್ರಹವಿರುತ್ತದೆ ಎಂಬುದಕ್ಕೆ ಈ ಪೆರಡಾಲವೇ ಸಾಕ್ಷಿಯಾಗಿದೆ. ಸಮರ್ಪಣಾ ಭಾವ, ಸೇವಾಮನೋಭಾವ ಇದ್ದ ಊರು ಅಭಿವೃದ್ಧಿಯನ್ನು ಕಾಣುತ್ತದೆ ಎಂದು ಒಡಿಯೂರು ಶ್ರೀ ದತ್ತಾತ್ರೇಯ ಕ್ಷೇತ್ರದ ಪರಮಪೂಜ್ಯ ಸಾಧ್ವಿ ಮಾತಾನಂದಮಯಿ ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 5ನೇ ದಿನ ನಡೆದ ಧಾರ್ಮಿಕ ಸಭೆ ಮಾತೃಸಮಾವೇಶದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಾ ದೇವಸ್ಥಾನ ಹಾಗೂ ಶಾಲೆ ಆ ಊರಿಗೆ ಕಣ್ಣು ಇದ್ದಂತೆ. ಅವೆರಡನ್ನೂ ಜೋಪಾನವಾಗಿ ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯ. ಇಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ನಾಡಿನ ಜನರ ಒಗ್ಗಟ್ಟಿನ ಫಲವಾಗಿದೆ ಎಂದರು. ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕಳ ಮಲಾರ್ಬೀಡು ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟಿನ ಡಾ| ಆಶಾ ಜ್ಯೋತಿ ರೈ ಮಾಲಾಡಿ ಧಾರ್ಮಿಕ ಭಾಷಣ ಮಾಡಿದರು. ಹಿರಿಯ ಸ್ತ್ರಿರೋಗ ತಜ್ಞೆ ಡಾ| ಶಾಂಭವಿ ಎಚ್., ಡಾ| ಕವಿತಾ ಶೆಟ್ಟಿ ಕಂಡೆತ್ತೋಡಿ, ಡಾ| ವಸುಂಧರಾ ಕೈಲಾಸನಾಥ್, ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಡಾ| ಮಾಲತಿ ಪ್ರಕಾಶ್ ನೀರ್ಚಾಲು, ಪ್ರಮೀಳಾ ನಾಯ್ಕ, ಮುಖ್ಯೋಪಾಧ್ಯಾಯಿನಿ ಮಿನಿ, ಬ್ರಹ್ಮಕಲಶೋತ್ಸವ ಮಾತೃಸಮಿತಿ ಅಧ್ಯಕ್ಷೆ ವಿನಯಾ ಜೆ.ರೈ, ಗೌರವಾಧ್ಯಕ್ಷೆ ಸೀತಾಲಕ್ಷ್ಮಿ ಪಂಜಿತ್ತಡ್ಕ, ಅಧ್ಯಾಪಿಕೆ ಪ್ರಭಾವತಿ ಕೆದಿಲ್ಲಾಯ, ಪ್ರತಿಭಾ, ದೀಪಶ್ರೀ, ಮಧುಶ್ರೀ ಅಳಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾತೃಸಮಿತಿ ಕಾರ್ಯದರ್ಶಿ ಅಧ್ಯಾಪಿಕೆ ಅನಿತಾ ಸ್ವಾಗತಿಸಿ, ಅಧ್ಯಾಪಿಕೆ ಜಯಲತಾ ಟೀಚರ್ ವಂದಿಸಿದರು.

