ನಮ್ಮ ಭವಿಷ್ಯ ಭದ್ರವಾಗಬೇಕಾದರೆ ಸನಾತನ ಧರ್ಮ, ಸಂಸ್ಕೃತಿಯ ರಕ್ಷಣೆ ಪೋಷಣೆ ಅನಿವಾರ್ಯ - ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ೪ನೇ ದಿನ ಧಾರ್ಮಿಕ ಸಭೆ
ಬದಿಯಡ್ಕ: ಪ್ರಕೃತಿಯನ್ನು ಉಳಿಸುವ ಗೌರವಿಸುವ ನಿಷ್ಠೆ ನಮ್ಮಲ್ಲಿರಬೇಕು.ಪ್ರಕೃತಿ ಕಂಗೊಳಿಸಿದರೆ ಮಾತ್ರ ನಮ್ಮ ಜೀವನ ಬೆಳಗಲು ಸಾಧ್ಯ. ದೇವರಿಗೆ ನಾವು ಕೃತಜ್ಞರಾಗಿದ್ದರೆ ಮಾತ್ರ ನಮಗೆ ದೇವರ ಅನುಗ್ರಹವಿರುತ್ತದೆ. ಆಧುನಿಕ ಯುಗದಲ್ಲಿ ಬಲಾತ್ಕಾರವಾಗಿ ಪರಿವರ್ತನೆಯನ್ನು ಮಾಡುವಂತಹ ಜ್ವಲಂತ ಸಮಸ್ಯೆಯನ್ನು ಮೆಟ್ಟಿನಿಲ್ಲಬೇಕು. ನಮ್ಮ ಭವಿಷ್ಯ ಭದ್ರವಾಗಬೇಕಾದರೆ ಸನಾತನ ಧರ್ಮ, ಸಂಸ್ಕೃತಿಯ ರಕ್ಷಣೆ ಪೋಷಣೆ ಅನಿವಾರ್ಯ. ರುದ್ರ ದೇವನ ಆರಾಧನೆಯಿಂದ ಮನಸ್ಸಿಗೆ ಶಕ್ತಿ ತುಂಬುತ್ತದೆ ಎಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ೪ನೇ ದಿನವಾದ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಜಗದ್ಗುರು ಶ್ರೀಮದ್ ಮದ್ವಾಚಾರ್ಯ ಮೂಲ ಸಂಸ್ಥಾನಮ್ ಶ್ರೀಸುಬ್ರಹ್ಮಣ್ಯ ಮಠದ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜೀಯವರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಧಾರ್ಮಿಕ, ಶೈಕ್ಷಣಿಕ ಮುಂದಾಳು ಜಯದೇವ ಖಂಡಿಗೆ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಘನ ಉಪಸ್ಥಿತಿವಹಿಸಿದ್ದರು. ಕ್ಷೇತ್ರಾಚಾರ್ಯ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣದಲ್ಲಿ ಆಧ್ಯಾತ್ಮಿಕವಾದ ಶಕ್ತಿಯನ್ನು ಪರಿಪೂರ್ಣವಾಗಿ ಪಡೆದುಕೊಳ್ಳಲು ದೇವರ ಆರಾಧನೆ ಅತೀ ಮುಖ್ಯ. ಜೀವನವೆಂಬ ಯಾನದಲ್ಲಿ ಎಲ್ಲಾ ಸುಖದುಃಖಗಳನ್ನು ಅನುಭವಿಸಿಕೊಂಡು ಸರಿಯಾದ ಜೀವನವನ್ನು ರೂಪಿಸಲು ಭಗವಂತನ ಅನುಗ್ರಹವಿರಬೇಕು. ಆತ ನೀಡಿದ ಅತ್ಯಂತ ಶ್ರೇಷ್ಠವಾದ ಜನ್ಮವನ್ನು ಪಾವನಗೊಳಿಸಬೇಕು. ಹಿಂದುವಾಗಿ ಹುಟ್ಟಿ ಹಿಂದುವಾಗಿ ಜೀವಿಸಿ ಹಿಂದುವಾಗಿಯೇ ಮರಣಹೊಂದಬೇಕು. ಜ್ಞಾನವೆಂಬ ಕಣ್ಣಿಗೆ ಪ್ರಪಂಚವನ್ನು ಅರಿಯುವ ಶಕ್ತಿ ಇದೆ. ಧಾರ್ಮಿಕ ಶ್ರದ್ಧಾಕೇಂದ್ರಗಳು ಧರ್ಮವನ್ನು ಉತ್ಪಾದಿಸುವ ಕಾರ್ಖಾನೆಗಳು. ಧನಾತ್ಮಕ ಶಕ್ತಿಗಳು ಇರುವಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದರು.
ಆರ್ಥಿಕ ಸಮಿತಿ ಅಧ್ಯಕ್ಷ ಉದ್ಯಮಿ ನಿತ್ಯಾನಂದ ಶೆಣೈ, ಕೆಎಸ್ಇಬಿ ನಿರ್ದೇಶಕ ಸುರೇಂದ್ರ ನಾಯ್ಕ, ಆನಂದ ಸುಬ್ರಹ್ಮಣ್ಯ ನಾರಾವಿ, ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಎಂಸಿಎಫ್ ನಿವೃತ್ತ ಮುಖ್ಯ ಪ್ರಬಂಧಕ ಜಯಶಂಕರ ರೈ ಬಾಯಾರುಗುತ್ತು ಗೌರವ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಪೆರ್ಮುಖ, ಸುಬ್ರಹ್ಮಣ್ಯ ಭಟ್ ಮಕ್ಕಿಕಾನ, ಡಾ.ವೇಣುಗೋಪಾಲ ಕಳೆಯತ್ತೋಡಿ, ಜಯಪ್ರಕಾಶ್ ಶೆಟ್ಟಿ ಕಡಾರುಬೀಡು, ಕೆಎಸ್ಇಬಿ ಇಂಜಿನೀಯರ್ ರಾಜಗೋಪಾಲ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಮದನ ಎಂ., ಜಯಪ್ರಕಾಶ ಪಜಿಲ, ಕೃಷ್ಣಭಟ್ ಪುದ್ಯೋಡು ಮೊದಲಾದವರು ಭಾಗವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ನಾರಾಯಣ ಮುರಿಯಂಕೂಡ್ಲು ಸ್ವಾಗತಿಸಿ, ಉಪಾಧ್ಯಕ್ಷ ವೈ. ರಾಘವೇಂದ್ರ ನಾಯಕ್ ಬದಿಯಡ್ಕ ವಂದಿಸಿದರು. ಬ್ರಹ್ಮಕಲಶ ಸೇವಾ ಕಚೇರಿ ಸಮಿತಿ ಪ್ರಧಾನ ಸಂಚಾಲಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ನಿರೂಪಿಸಿದರು.
ಕಾಣೆಯಾದ ವಸ್ತುವನ್ನು ಮರಳಿ ಪಡೆಯಲು ಪೆರಡಾಲದ ಕುಟ್ಟಿಚ್ಚಾತನಿಗೆ ಜೋಡುಪಡೆಯ ಹರಕೆ ಹೊತ್ತರೆ ಸಾಕು ಎಂಬುದು ಪೆರಡಾಲದ ಅನೇಕ ಭಕ್ತರಿಗೆ ತಿಳಿದಿರುವ ವಿಚಾರ. ಈ ನಿಟ್ಟಿನಲ್ಲಿ ಕುಟ್ಟಿಚ್ಚಾತನಿಗೆ ನಿತ್ಯಸೇವೆಯನ್ನು ನೀಡುತ್ತಿರುವುದು ದೇವರು ಇದ್ದಾನೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
- ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು

