ಅಣ್ಣ-ತಂಗಿಯರ ಪ್ರೀತಿಯ ದ್ಯೋತಕವೇ ರಾಖಿ ಕಟ್ಟುವ ಪದ್ಧತಿ. ಇದನ್ನು ಶ್ರಾವಣ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯ. ಸೋದರ-ಸೋದರಿಕೆ ಸಂಕೇತವಾಗಿ ಕಟ್ಟುವ ಈ ರಕ್ಷಾಬಂಧನಕ್ಕೆ ವಿಶಿಷ್ಟ ಅರ್ಥವಿದೆ. ಯಾರೇ ಒಬ್ಬಳು ಹೆಣ್ಣು ಮಗಳು ಮತ್ತೊಬ್ಬ ಗಂಡಿಗೆ ,ಅಥವಾ ಒಬ್ಬ ಗಂಡು ಇನ್ನೊಬ್ಬ ಹೆಣ್ಣಿಗೆ ರಾಖಿ ಕಟ್ಟಿದರೆಂದರೆ ಅವರ ನಡುವೆ ಸೋದರ ಭಾವನೆಯೇ ಹೊರತು ಅನ್ಯಥಾ ಸುಳಿಯುವ ಮಾತೇ ಇಲ್ಲ.ಇಂತಹ ತತ್ವವನ್ನು ಬಿಂಬಿಸುವ ಈ ಹಬ್ಬವನ್ನು ಭಾರತದೆಲ್ಲೆಡೆ ಆಚರಿಸುತ್ತಾರೆ. ಇದನ್ನು ನೂಲ ಹುಣ್ಣಿಮೆ ಹಬ್ಬವೆಂದೂ ಕರೆಯುತ್ತಾರೆ. ಸೋದರಿಯೊಡನೆ ಸೋದರನಾಗಿ ; ನಾನು ನಿನ್ನನ್ನು ರಕ್ಷಣೆ ಮಾಡ್ತೇನೆ ಎಂದು ಪ್ರಮಾಣ ವಚನದಂತಿದೆ ಈ ರಾಖಿ.
ಪಾಂಡವರನ್ನು ಕಪಟ ದ್ಯೂತದಲ್ಲಿ ಸೋಲಿಸಿದ ದಾಯಾದಿ ದುರ್ಯೋಧನನಿಗೆ ಮತ್ಸರದಿಂದ ಪಾಂಡವರನ್ನು ಮುಗಿಸುವ ಹಠವು ಬೇರೂರಿತು. ಅವರನ್ನು ಕೊಲ್ಲುವುದಕ್ಕಾಗಿ ಅರಗಿನ ಮನೆಯಲ್ಲಿರಿಸಿ ಬೆಂಕಿಕೊಡುವ ಹುನ್ನಾರ ದುರ್ಯೋಧನ ಮಾಡಹೊರಟ. ಈ ದುಷ್ಟ ವರ್ತನೆಯ ಸುಳಿವು ವಿದುರನಿಗೆ ತಿಳಿದು ಅವನು ಪಾಂಡವರನ್ನು ರಕ್ಷಿಸುವ ಉಪಾಯದಲ್ಲಿ ತೊಡಗಿ ಗುಪ್ತವಾಗಿ ತಪ್ಪಿಸುವಂತೆ ಸುರಂಗಮಾರ್ಗವನ್ನು ಸೃಷ್ಟಿಸುತ್ತಾನೆ. ಅಲ್ಲಿಂದ ಪಾರಾದ ಪಾಂಡವರು ಊರೂರು ಅಲೆದಾಟದಲ್ಲಿ ತೊಡಗಿ ಕೆಲಕಾಲ ಪಾಂಚಾಲ ನಗರದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿ ಅಡಗಿರುತ್ತಾರೆ. ಪಾಂಡವರು ಅರಗಿನಮನೆಯಲ್ಲಿ ಸುಟ್ಟುಹೋದರೆಂದೇ ಕೌರವರು ತಿಳಿಯುತ್ತಾರೆ.
ಇಂತಿರಲು ಧರ್ಮಸ್ಥಾಪಕನೂ ಪಾಂಡವ ಪಕ್ಷಪಾತಿಯೂ ಆದ ಶ್ರೀಕೃಷ್ಣನು ಪಾಂಡವರ ಬೇಹುಗಾರನಾಗಿ ದುರ್ಯೋಧನನ ಅರಮನೆಗೆ ಬರುತ್ತಾನೆ. ಆಗ ದುರ್ಯೋಧನನ ಅನುಪಸ್ಥಿತಿಯಲ್ಲಿ ಆತನ ಮಡದಿಯಾದ ಭಾನುಮತಿಯೇ ಸ್ವಾಗತಿಸುತ್ತಾಳೆ. ಈಕೆ ಕಳಿಂಗ ರಾಜನ ಮಗಳು. ಭಾನುಮತಿ ಕುಶಲೋಪರಿ ವಿಚಾರಿಸಿ ಉಪಚಾರ ಮಾಡುತ್ತಾ ಕೃಷ್ಣನಿಗಾಗಿ ಕಾದಿರಿಸಿದ್ದ ಸರ್ವತೋಬದ್ಧ ಆಸನದಲ್ಲಿ ಕುಳ್ಳಿರಿಸುತ್ತಾಳೆ. ಭಾನುಮತಿ ಹಿಂದೆ-ಮುಂದೆ ನೋಡುತ್ತಾ "ಕೃಷ್ಣಾ ನಿನ್ನಲ್ಲೊಂದು ಮಾತನಾಡಬೇಕಾಗಿದೆಯಲ್ಲಣ್ಣ". ಎಂದು ಪ್ರಾರಂಭಿಸಿ .., "ಅಣ್ಣಾ ದ್ರುಪದರಾಜನ ಮಗಳು ದ್ರೌಪದಿಗೆ ಸ್ವಯಂವರವಂತೆ!. ನನ್ನ ಪತಿರಾಯ ದುರ್ಯೋಧನನು ಆಕೆಯನ್ನು ವರಿಸಲು ಹಾತೊರೆಯುತ್ತಿದ್ದಾನೆ!!. ಆ ಸೌಂದರ್ಯ ಖನಿ ದ್ರೌಪದಿಯನ್ನು ದುರ್ಯೋಧನ ವರಿಸದಂತೆ ನೀನು ತಪ್ಪಿಸಬೇಕು. ಎಂದು ದೀನಳಾಗಿ ಕೃಷ್ಣನಲ್ಲಿ ಬೇಡಿಕೊಳ್ಳುತ್ತಾ ಮುಂದುವರಿಸುತ್ತಾಳೆ. "ನೋಡಣ್ಣ.., ದ್ರೌಪದಿ ಅತಿಚೆಲುವೆ.ಆಕೆಯನ್ನು ನನ್ನ ಪತಿ ವಿವಾಹವಾದರೆ ನನಗಿಲ್ಲಿ ಸ್ಥಾನವಿಲ್ಲ". ನಿನ್ನ ಸ್ವಂತ ಸೋದರಿಯೆಂಬ ನೆಲೆಯಲ್ಲಿ ನನ್ನನ್ನು ಕಾಪಾಡಣ್ಣ".
ಅವಳ ಮಾತು ಕೇಳಿದ ಕೃಷ್ಣನಿಗೆ ಮುಗುಳು ನಗೆಮೂಡಿ ಮರೆಯಾಯಿತು.
ಅವನ ಮಾತಿನಿಂದ ಸಮಾಧಾನ ತಾಳಿದಳಾದರೂ ಮತ್ತೆ ಮತ್ತೆ ಅದನ್ನೇ ಒತ್ತಿ,ಒತ್ತಿ ಹೇಳುತ್ತ ತನ್ನ ಸೀರೆಯ ಸೆರಗಿನ 'ಜರಿ' ಅಂಚನ್ನು ಹರಿದು ಕೃಷ್ಣನ ಬಲಗೈಗೆ ರಾಖಿ ಕಟ್ಟುತ್ತಾ.., "ಅಣ್ಣ ದ್ರೌಪದಿಯ ಸ್ವಯಂವರದ ದಿನ ನಾನು ಕಟ್ಟಿದ ಈ ರಾಖಿಯನ್ನು ನೆನಪು ಮಾಡಿಕೊಳ್ಳಣ್ಣ"
ಎನ್ನುತ್ತಾಳೆ.
ದ್ರೌಪದಿಯನ್ನು ದುರ್ಯೋಧನನು ವರಿಸದಂತೆ ತಡೆಯಲು ಅಥವಾ ಆ ಪ್ರಕಾರವಾಗಿ ಕಾರ್ಯ ರೂಪಿಸಲು ಕೃಷ್ಣನೇ ತಕ್ಕುದಾದವ ಎಂದು ಭಾನುಮತಿ ಅರ್ಥ ಮಾಡಿಕೊಂಡಿದ್ದಳು.
ಇಂದಿನ ಸೋದರಿಯರು ಈ ಅಂಶವನ್ನು ಮುಖ್ಯವಾಗಿ ಗಮನಿಸಬೇಕು. ತಮ್ಮ ಕಾರ್ಯವನ್ನು ಎಲ್ಲಿ?, ಹೇಗೆ ಯಾರ ಮೂಲಕ ಸಾಧಿಸಬೇಕು ಎಂಬುದನ್ನು ತಾವು ಎಚ್ಚರವಹಿಸಿ ಮಾಡಬೇಕು. ಗುರಿಯಿದ್ದರೆ ಸಾಲದು., ಅದರ ರೂಪುರೇಶೆಯೂ ಅಗತ್ಯ. ಎಂಬಂಶ ಈ ಕಥೆಯಿಂದ ಮನದಟ್ಟಾಗುವುದು.
ಹೀಗೆ ಅಣ್ಣ-ತಂಗಿ ಸಂಬಂಧದ ಪ್ರತೀಕವಾದ ರಾಖಿಯನ್ನು ಲೋಕದಲ್ಲಿ ಪ್ರಥಮವಾಗಿ ಭಾನುಮತಿಯು ಕೃಷ್ಣನ ಕೈಗೆ ಕಟ್ಟಿದಳಲ್ಲದೆ ಮುಂದೆ ತನ್ನ ಮನೋಭೀಷ್ಟದಲ್ಲಿ ಜಯ ಸಾಧಿಸಿದಳು ಎಂಬಂಶ ಈ ಕಥೆ ಸಾರುತ್ತದೆ.
