ಉಡುಪಿ, ಪಡುಕುತ್ಯಾರು: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ದಾರಿ ತಪ್ಪುವಾಗ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿ ಮಕ್ಕಳನ್ನು ಬೆಳೆಸಬೇಕಾದ ಕರ್ತವ್ಯ ಹೆತ್ತವರಿಗೆ ಇದೆ ಎಂದು ಧಾರ್ಮಿಕ ಚಿಂತಕಿ ಶ್ರೀಮತಿ ಹೇಮಲತಾ ಎನ್. ಸ್ವಾಮೀಜಿ ಶಿಕಾರಿಪುರ ಅವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನದಲ್ಲಿ ಸರಸ್ವತೀ ಸತ್ಸಂಗ ಮಂದಿರದಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಸುಸಂದರ್ಭದಲ್ಲಿ ಮಹಾಸಂಸ್ಥಾನದ ಶ್ರೀಸರಸ್ವತೀ ಮಾತೃ ಮಂಡಳಿಯ ವತಿಯಿಂದ ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಪ್ರಜ್ಞೆ ಎಂಬ ವಿಷಯದಲ್ಲಿ . ನಡೆದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತೆ ಮತ್ತು ಮಕ್ಕಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿ ಮಾತನಾಡುತ್ತಿದ್ದರು.
ತಾಯಿ ಪ್ರಜ್ಞಾವಂತಳಾದರೆ ಸರಿಯಾದ ಮಾರ್ಗದರ್ಶನ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ. ಸರಿಯಾದ ಮಾರ್ಗದರ್ಶನ ಇಲ್ಲದಿದ್ದರೆ ಸಮಾಜ ಕಂಟಕರಾಗಲೂ ಸಾಧ್ಯ. ಮಕ್ಕಳನ್ನು ದೈಹಿಕ, ಮಾನಸಿಕ ಮತ್ತು ಶಾರೀರಿಕವಾಗಿ ಬಲಿಷ್ಠರಾಗಿ ಬೆಳೆಸಬೇಕು ಎಂದು ನುಡಿದ ಅವರು ತಾಯಿಯು ಕುಂತಿಯೂ ಆಗಬಹುದು ಗಾಂಧಾರಿಯೂ ಆಗಬಹುದು ಆಯ್ಕೆ ನಮ್ಮಲ್ಲಿದೆ. ಎಂದರು. ಪ್ರತೀ ಮಗುವು ಬೆಳೆಯುವ ಪರಿಸರವನ್ನು ಹೊಂದಿಕ್ಕೊಂಡು ಮುಂದಿನ ಜೀವನ ನಿರ್ಮಾಣವಾಗುತ್ತದೆ ಎಂದು ನುಡಿದ ಅವರು ನಾವು ವಿಕಾರದತ್ತ ನಡೆಯಬಾರದು, ವಿಕಾಸದತ್ತ ಮುನ್ನಡೆಯಬೇಕು, ದೇವಸ್ಥಾನ ಗುರು ಮಠದ ಸೇವೆಯಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ತೊಡಗಿಸಿಕ್ಕೊಳುವಂತೆ ಕರೆ ನೀಡಿದರು.
ಮಕ್ಕಳ ಆಂತರಿಕ ಬೆಳವಣಿಗೆಗೆ ಒತ್ತು ನೀಡಬೇಕು ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ, ಹಾಳಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಇಲ್ಲದಿರುವುದೇ ಇಂದಿನ ಜ್ವಲಂತ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಇದರಿಂದಾಗಿ ನಮ್ಮ ಸಂಸ್ಕಾರ ಸಂಸ್ಕೃತಿಯ ನಿರ್ಮೂಲ ಪ್ರಾರಂಭವಾಗುತ್ತದೆ ಎಂದು ಖ್ಯಾತ ಯುವ ಚಿಂತಕಿ ಶ್ರೀಮತಿ ಅಕ್ಷತಾ ಬಜ್ಪೆ ಅವರು ನುಡಿದರು. ತಾಯಂದಿರು ಮಕ್ಕಳ ಜತೆ ಇರಲು ದಿನಕ್ಕೆ ಕನಿಷ್ಠ ಒಂದು ಗಂಟೆ ಮೀಸಲಿಡಬೇಕು, ಅವರೊಂದಿಗೆ ಚೆನ್ನಾಗಿ ಬೆರೆತು ಮಾತನಾಡಬೇಕು, ಅವರ ಸಂತಸ ಬೇಸರದ ಕ್ಷಣಗಳ ಬಗ್ಗೆ ತಿಳಿಯಬೇಕು ಇಲ್ಲದಿದ್ದರೆ ಅವರು ಮಾತನಾಡಲು ಬೇರೆ ಜನರನ್ನು ಆಯ್ಕೆ ಮಾಡುತ್ತಾರೆ ಎಂದು ನುಡಿದ ಅವರು ಮಕ್ಕಳ ಜೀವನ ಓನ್ ಲೈನ್ ಆಗಿದೆ. ಅವರು ಓನ್ ಲೈನ್ ವಿಷಯದಲ್ಲಿ ಇದ್ದಾರಾ ಇಲ್ಲಾ ವಿಷಯಾಂತರವಾಗುತ್ತಿದ್ದಾರಾ ಎಂದು ಗಮನಿಸಿ, ಮಕ್ಕಳ ನಡವಳಿಕೆಯನ್ನು, ನಡೆನುಡಿಗಳನ್ನು, ಆಗು ಹೋಗುಗಳನ್ನು , ಚಲನವಲನಗಳನ್ನು ಗಮನಿಸಬೇಕು, ಎಂದು ಅವರು ವಿವರಿಸಿದರು. ಅವರು ವಿಚಾರ ಗೋಷ್ಠಿಯಲ್ಲಿ ವಿದ್ಯಾರ್ಥಿ ಜೀವನದ ಬಗ್ಗೆ ಮಾತನಾಡುತ್ತಿದ್ದರು.
ಶರೀರಕ್ಕೆ ಅಲಂಕಾರವಾದರೆ ಸಾಲದು ದೇವರ ಭಜನೆ ಪೂಜೆಗಳಿಂದ ಜೀವನಕ್ಕೆ, ಆತ್ಮಕ್ಕೆ ಅಲಂಕಾರ ಮಾಡಬೇಕು ಎಂದು ಮಠ ಮಂದಿರಗಳ ಬಗ್ಗೆ ವಿಚಾರ ಮಂಡಿಸಿ ಮಾತನಾಡಿದ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಕಲ್ಲಡ್ಕ ಅವರು ನುಡಿದರು. ಸಂಸ್ಕಾರ ಮನೆಯಿಂದ ಬರಬೇಕು, ಅದು ಹೆತ್ತವರಿಂದ ಆರಂಭವಾಗಬೇಕು. ಮಕ್ಕಳು ನಮ್ಮನ್ನು ಅನುಕರಣೆ ಮಾಡುತ್ತಾರೆ. ಬದುಕಿನಲ್ಲಿ ಶ್ರದ್ದೆ ಮತ್ತು ನಂಬಿಕೆ ಅತೀ ಅಗತ್ಯ ಇದು ಇದ್ದಲ್ಲಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಅವರು ನುಡಿದರು.
ಇದೇ ವೇಳೆ ಪಡುಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲತಾ ಎಸ್. ಆಚಾರ್ಯ ಕುತ್ಯಾರು, ಖ್ಯಾತ ಕುಸುರಿಕಲಾಗಾರ್ತಿ ಶ್ರೀಮತಿ ಗುಲಾಭಿ ಪಟ್ಟಾಭಿರಾಮನ್ ಕೊಕ್ಕರ್ಣೆ, ಕಮ್ಮಾರ ವೃತ್ತಿ ಮಾಡುವ ಸಾಧಕಿ ಶ್ರೀಮತಿ ಲೀಲಾವತಿ ಅಪ್ಪಯ್ಯ ಆಚಾರ್ಯ ಪೈಕ, ಯಕ್ಷಗಾನ ಕಲಾ ಯುವ ಪ್ರತಿಭೆ ಕು. ಶ್ರೇಯಾ ಆಚಾರ್ಯ ಆಲಂಗಾರು ಇವರಿಗೆ ಗೌರವಾಭಿನಂದನೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ವಹಿಸಿದ್ದರು.
ಮಾತೃಮಂಡಳಿಯ ಗೌರವಾಧ್ಯಕ್ಷೆ ಮಾತೋಶ್ರೀ ಸರಳಮ್ಮಾ ಜಿ.ಸ್ವಾಮೀಜಿ ಶಿಕಾರಿಪುರ, ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಶುಭಾಶಂಸನೆಗೈದರು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವಚನದಲ್ಲಿ ಮಾತೃ ಮಂಡಳಿಯ ಮಹಿಳಾ ಸಮಾವೇಶ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿದೆ, ಮಾತೆಯರ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ಮಹಿಳೆಯು ತನ್ನನ್ನು ತಾನು ತೊಡಗಿಸಿಕೊಳ್ಳ ಬೇಕಾಗಿದೆ ಎಂದು ಕರೆ ನೀಡಿದರು.
ಉಪಾಧ್ಯಕ್ಷೆ ಶ್ರೀಮತಿ ಸುಮನಾ ಸುಧಾಕರ ಆಚಾರ್ಯ ತ್ರಾಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಜ್ಯೋತಿ ರಾಘವೇಂದ್ರ ಆಚಾರ್ಯ ಉಡುಪಿ, ಶ್ರೀಮತಿ ದೀಪಾ ಸುರೇಶ್ ಉಡುಪಿ, ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಸುಳ್ಯ, ಶ್ರೀಮತಿ ರತ್ನಾವತಿ ಮೋಹನ ಆಚಾರ್ಯ ಕಟಪಾಡಿ, ಶ್ರೀಮತಿ ಶಾಲಿನಿ ರತ್ನಾಕರ ಆಚಾರ್ಯ, ಶ್ರೀಮತಿ ರಮಾ ಅಚ್ಯುತ ಆಚಾರ್ಯ, ಶ್ರೀಮತಿ ಸುಮಾ ರತ್ನಾಕರ ಆಚಾರ್ಯ ಉದ್ಯಾವರ ಅವರು ಗೋಷ್ಠಿಗೆ ಸಹಕರಿಸಿದರು. ಶ್ರೀಮತಿ ಅರ್ಪಿತ ಮಹೇಶ್ ಆಚಾರ್ಯ ಉಡುಪಿ ಕವನ ವಾಚಿಸಿದರು. ಕಟಪಾಡಿಯ ಮಹಿಳಾ ಬಳಗದವರಿಂದ ಪ್ರಾರ್ಥನೆ ನಡೆಯಿತು. ಮಾತೃಮಂಡಳಿ ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ ಧನ್ಯವಾದವನ್ನಿತ್ತರು. ಕಾರ್ಯದರ್ಶಿ ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
