ಮಂಗಳೂರು : ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಿವಾಸಿಗಳು ಕೇರಳವನ್ನು ಆಶ್ರಯಿಸದೆ ಉದ್ಯೋಗ, ವಿದ್ಯೆ, ಆರೋಗ್ಯ ಏನೇ ವಿಷಯದಲ್ಲೂ ಮಂಗಳೂರನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಇದು ಇಲ್ಲಿಯ ಕನ್ನಡಿಗರಿಗೆ ಅನಿವಾರ್ಯ ಕೂಡಾ. ಇತ್ತೀಚಿನ ಕಾನೂನು ನಿಯಮದ ಪ್ರಕಾರ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವುದು ಕಾಸರಗೋಡು, ಮಂಜೇಶ್ವರ ಪ್ರದೇಶದವರಿಗೆ ಬಹಳಷ್ಟು ತೊಂದರೆ ಆಗಿರುತ್ತದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಲಿಯುತ್ತಿರುವ ಇಲ್ಲಿಯ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ಮತ್ತೆ ಮತ್ತೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳೋದು ಮಕ್ಕಳ ಮನಸ್ಸಿಗೆ ಮಾನಸಿಕ ಅಘಾತ ತರುವಂತಹುದು ಮತ್ತು ಮೂಗಿನ ಸಮಸ್ಯೆಯೂ ಕಾಡಿರುವುದು ಹಲವುಕಡೆ ಕಂಡು ಬಂದಿರುತ್ತದೆ. ಆದ್ದರಿಂದ ಮಾನ್ಯ ದ.ಕ. ಜಿಲ್ಲಾಧಿಕಾರಿಯವರು ಸೂಕ್ತವಾಗಿ ಪರಿಶೀಲಿಸಿ ಕೇರಳದ ಹದಿನಾಲ್ಕು ಜಿಲ್ಲೆಗಳ ಪೈಕಿ ಕಾಸರಗೋಡು ಜಿಲ್ಲೆಯವರಿಗೆ ಮಾತ್ರ ದ.ಕ. ಜಿಲ್ಲೆಯ ಅಗತ್ಯ ಇರುವುದರಿಂದ ಮತ್ತು ಕಾಸರಗೋಡು, ಮಂಜೇಶ್ವರ ಪ್ರದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದರಿಂದ ಅಥವಾ ಅತೀ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಈ ಭಾಗದ ಜನರಿಗೆ ಯಾವುದೇ ತಪಾಸಣೆ ಇಲ್ಲದೆ ಕರ್ನಾಟಕಕ್ಕೆ ಸಂಪರ್ಕ ಒದಗಿಸಿಕೊಡಬೇಕಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ದುರ್ಗಾವಾಹಿನಿ ಕಾಸರಗೋಡು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಜಯದೇವ ಖಂಡಿಗೆ, ಪ್ರಧಾನ ಕಾರ್ಯದರ್ಶಿ ಶಂಕರ ಭಟ್ ಉಲುವಾಣ, ಜಿಲ್ಲಾ ಸೇವಾ ಪ್ರಮುಖ್ ಸುರೇಶ್ ಶೆಟ್ಟಿ ಪರಂಕಿಲ, ಜಿಲ್ಲಾ ಸಹ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಭಜರಂಗದಳ ಜಿಲ್ಲಾ ಸಂಯೋಜಕ ಶೈಲೇಶ್ ಅಂಜರೆ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ರೀಮತಿ ಸೌಮ್ಯ ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು.
ವರದಿ : ರತನ್ ಕುಮಾರ್ ಹೊಸಂಗಡಿ
