ನವರಾತ್ರಿಯ ನಾಲ್ಕನೆಯ ದಿನ :-
"ಕುಷ್ಮಾಂಡ ದೇವಿಯ ಹಿನ್ನಲೆ, ವಿಶೇಷ, ಕಥೆ ಮತ್ತು ಮಹತ್ವ :-"
"ಕುತ್ಸಿತಃ ಉಷ್ಮಾಃ ಕೂಷ್ಮಾಃ|"
"ಕುತ್ಸಿತಃ" ಅಂದರೆ "ಸಹಿಸಲು ಕಠಿಣವೆನಿಸಿದ್ದು". "ಉಷ್ಮಾ" ಎಂದರೆ "ಸೂಕ್ಷ ಲಹರಿಗಳ ಧ್ವನಿ".
"ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|". ಇಲ್ಲಿ ಈ ಶ್ಲೋಕದ ಅರ್ಥವು ಹೀಗಿದೆ.
ತ್ರಿವಿಧದ ತಾಪಗಳೆಂದರೆ, ಉತ್ಪತ್ತಿ [ ಜನ್ಮ ], ಸ್ಥಿತಿ [ ಬೆಳವಣಿಗೆ ] ಮತ್ತು ಲಯ [ ಮೃತ್ಯು ]. ಇಲ್ಲಿ "ಮೃತ್ಯು" ಎಂದರೆ "ಮೋಕ್ಷದ ಸಂಕೇತ". ಅಂದರೆ, ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶಹೊಂದುವುದು.
"ಸಂಸಾರ"ವೆಂದರೆ, "ಪುನಃಪುನಃ". ಮತ್ತು "ಅಂಡ" ಎಂದರೆ, "ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ". "ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನಾರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ.
ಈ ಪ್ರಕ್ರಿಯೆಗಳಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಅವಶ್ಯಕತೆಯಿದೆಯೋ ಅವಳನ್ನೇ ಕೂಷ್ಮಾಂಡ ಎಂದು ಕರೆಯಲಾಗುತ್ತದೆ.
"ಕೂಷ್ಮಾಂಡ ದೇವಿ ರೂಪದ ಅರ್ಥ :-"
ನವರಾತ್ರಿಯ ನಾಲ್ಕನೆಯ ದಿನ ದುರ್ಗಾ ಮಾತೆಯ ನಾಲ್ಕನೇ ಅವತಾರವಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಇವಳದ್ದು ಸದಾ ಮಂದಸ್ಮಿತವಾದ ಮುಖ. ಇವಳ ಆರಾಧನೆಯಿಂದ ನಮ್ಮ ಆತ್ಮದೊಳಗಿನ ಕ್ಷೇಷದ ಭಾವನೆಗಳು ಅಂತ್ಯಗೊಂಡು ಜ್ಞಾನದ ಬೆಳಕು ಮೂಡುತ್ತದೆ.
ಸಂಸ್ಕೃತ ಭಾಷೆಯಲ್ಲಿ "ಕೂಷ್ಮಾಂಡ" ಎಂದರೆ, "ಬೂದುಗುಂಬಳಕಾಯಿ" ಎಂದರ್ಥ. ಆಯುರ್ವೇದ ಶಾಸ್ತ್ರದಲ್ಲಿ ಬೂದುಗುಂಬಳಕಾಯಿಯನ್ನು ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರವೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ಜ್ಞಾನವರ್ಧಕ, ತೇಜೋವರ್ಧಕವೆಂದು ಬಣ್ಣಿಸಲಾಗುತ್ತದೆ.
ಕೂಷ್ಮಾಂಡ ಎಂಬ ಪದವನ್ನು ಬಿಡಿಸಿದಾಗ ಇಲ್ಲಿ "ಕು" ಎಂದರೆ "ಚಿಕ್ಕದ್ದು". "ಉಷ್ಮ" ಎಂದರೆ "ಶಕ್ತಿ" ಮತ್ತು "ಅಂಡ" ಎಂದರೆ "ಭ್ರೂಣ" ಎಂದರ್ಥ. ಒಟ್ಟಾರೆಯಾಗಿ ಹೇಳುವುದಾದರೆ, ಇಡೀ ಬ್ರಹ್ಮಾಂಡವೆಂಬ ಚೈತನ್ಯ ಶಕ್ತಿಯನ್ನು ತನ್ನ ಒಡಲಿನಲ್ಲಿಟ್ಟುಕೊಂಡವಳು.
ದುರ್ಗಾ ಸಪ್ತಶತಿಯ ಪ್ರಕಾರ, ಕೂಷ್ಮಾಂಡ ದೇವಿಯು ಜಗತ್ತಿನ ಸೃಷ್ಟಿಗೆ ಮತ್ತು ಜೀವಜಾತುಗಳ ಕಾರಣಕರ್ತಳು ಆಗಿರುವಳು ಹಾಗೂ ಇಡೀ ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುವಳು. ಇವಳ ಮೈಬಣ್ಣವು ವಿಕಿರಣತೆಯಿಂದ ಕೂಡಿದ್ದು, ಚಿನ್ನದ ಬಣ್ಣದಿಂದ ಕೂಡಿದೆ. ಇವಳು ತನ್ನ ವಾಹನವಾದ ಸಿಂಹದ ಮೇಲೆ ಸವಾರಿ ಮಾಡಿ ದುಷ್ಟರ ಸಂಹಾರ ಮಾಡುವ ಮೂಲಕ ಜಗತ್ತಿನ ಸಂರಕ್ಷಕ ಕ್ರಿಯೆಗಳಿಗೆ ಮುನ್ನುಡಿ ಹಾಕುವಳು.
"ಕೂಷ್ಮಾಂಡ ದೇವಿಯ ವಿಶೇಷ :-"
ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು.
ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ.
ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ.
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.
"ಕೂಷ್ಮಾಂಡ ದೇವಿಯ ಕಥೆ :-"
ಜಗತ್ತಿನ ಸೃಷ್ಟಿಯ ಅಸ್ತಿತ್ವವಿಲ್ಲದಿರುವಾಗ ಇಡೀ ಜಗತ್ತಿನಲ್ಲಿ ಅಂಧಕಾರವು ಮನೆ ಮಾಡಿತ್ತು. ಆಗ ಕೂಷ್ಮಾಂಡ ದೇವಿಯು ತನ್ನ "ಈಶ್ಯತ್" ರೂಪದಿಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸುವಳು. ಆದ್ದರಿಂದ ಇವಳನ್ನು ಜಗತ್ಸೃಷ್ಟಿಯ ಆದಿ ಸ್ವರೂಪ ಶಕ್ತಿಯೆಂದು ಪರಿಗಣಿಸಲಾಗಿದೆ. ಈಕೆಯು ಸೂರ್ಯನ ಅಧಿದೇವತೆಯಾಗಿರುವ ಕಾರಣದಿಂದ ಇವಳು ಭೂಮಿಯ ಮೇಲಿನ ಅಂಧಕಾರವನ್ನೆಲ್ಲಾ ನಿವಾರಿಸಿ ಬೆಳಕಿನ ಶಕ್ತಿಯನ್ನು ಹೊರ ಹಾಕಿ ಜಗತ್ತಿನ ಸಂರಕ್ಷಕಳಾಗಿರುವಳು. ಇವಳು ಧರ್ಮದ ಪ್ರತೀಕಳೂ ಹೌದು.
"ಕೂಷ್ಮಾಂಡ ದೇವಿಯ ಮಹತ್ವ :-"
ಈ ದೇವಿಯ ಆರಾಧನೆಯಿಂದ ರವಿ ಗ್ರಹದ ದೋಷಗಳನ್ನು ನಿವಾರಿಸಬಹುದು.
ಕೂಷ್ಮಾಂಡ ದೇವಿಯ ಆರಾಧನೆಯಿಂದ ನಮ್ಮ ಬದುಕಿನ ಸಕಲ ಸಮಸ್ಯೆಗಳೂ ನಿವಾರಣೆಯಾಗಿ ಸಮಾಜದಿ ಪ್ರಸಿದ್ಧಿ ಪಡೆಯುತ್ತೇವೆ.
ಕೂಷ್ಮಾಂಡ ದೇವಿಯ ಆರಾಧನೆಯಿಂದ ನಮ್ಮ ಜೀವನದಲ್ಲಿ ಹೊಸ ಬೆಳಕಿನ ಕಿರಣಗಳು ಉದಯವಾಗಿ ಧನಾತ್ಮಕವಾದ ಚಿಂತನೆಗಳು ಹುಟ್ಟಲು ಆರಂಭವಾಗುತ್ತದೆ.
ಕೂಷ್ಮಾಂಡ ದೇವಿಯ ಭಕ್ತಿಪೂರ್ವಕವಾದ ಆರಾಧನೆಯಿಂದ ಭೂಮಿಯ ಅಧಿದೇವತೆಯಾಗಿರುವ ಇವಳು ನಮಗೆ ಭೂಮಿಯ ಮೇಲಿನ ಅಷ್ಟ ಐಶ್ವರ್ಯಗಳನ್ನು, ಆರೋಗ್ಯಪೂರ್ಣತೆಯನ್ನು ಮತ್ತು ಅಮೂಲ್ಯವಾದ ಶಕ್ತಿಯನ್ನು ಒದಗಿಸುವಳು.
ಕೂಷ್ಮಾಂಡ ದೇವಿಯು ಪೃಥ್ವಿಯ ಅಧಿದೇವತೆಯಾಗಿದ್ದು ಇವಳು ಸೂರ್ಯನ ಕೇಂದ್ರ ಸ್ಥಾನದಲ್ಲಿ ನೆಲೆಸಿರುವಳು.
ನಮ್ಮ ಬದುಕನ್ನು ಸಿದ್ಧಿ ಮತ್ತು ಮೋಕ್ಷದ ಮನೆಯತ್ತ ಕೊಂಡ್ಯೊಯಲು ಕೂಷ್ಮಾಂಡ ದೇವಿಯ ಆರಾಧನೆಯು ನೆರವಾಗುತ್ತದೆ.
ಕೂಷ್ಮಾಂಡ ದೇವಿಯ ಆರಾಧನೆಯಿಂದ ನಮ್ಮ ಆತ್ಮದೊಳಗಿನ ಅಂತಃಕರಣವು ಪರಿಶುದ್ಧತೆ ಹೊಂದಿ ಆಧ್ಯಾತ್ಮಿಕ ಜ್ಞಾನ ಸಾಧನೆಗೆ ಪ್ರೇರಣೆ ನೀಡುತ್ತದೆ.
ಲೇಖನ ಮತ್ತು ಸಂಗ್ರಹ : ಶ್ರೀ ಬೆಂಗಳೂರು
