ಮಂಗಳೂರು : ಕರ್ತವ್ಯದಲ್ಲಿದ್ದ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಸಿದ್ಧಾರ್ಥ್ ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ರಾತ್ರಿ ಕರ್ತವ್ಯದಲ್ಲಿದ್ದ ಇವರಲ್ಲಿ ಅನಾರೋಗ್ಯ ಕಂಡುಬಂದಿತ್ತು. ಸಹೋದ್ಯೋಗಿಗಳು ಮನೆಗೆ ಹೋಗಲು ಹೇಳಿದ್ದರು. ನಂತರ ಮನೆಗೆ ತೆರಳಿದ್ದ ಸಿದ್ಧಾರ್ಥ್ ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಉರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿದ್ದ ಇವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನಲಾಗಿದೆ. ಪುತ್ತೂರು ನೆಹರುನಗರ ನಿವಾಸಿಯಾಗಿದ್ದ ಇವರು 2002 ನೇ ಬ್ಯಾಚಿನಲ್ಲಿ ತರಬೇತಿ ಪಡೆದಿದ್ದರು. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.
