ಮಂಜುಶ್ರೀ ನ್ಯೂಸ್ ಉಡುಪಿ.
ನಮ್ಮ ಪ್ರತಿನಿಧಿ ವರದಿ
ಉಡುಪಿ /ಪಡುಕುತ್ಯಾರು: ಶಿಕ್ಷಣದಲ್ಲಿ ರಾಷ್ಟ್ರಹಿತ, ಧರ್ಮ ಹಿತ, ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಒಳಗೊಳ್ಳುವ ಶಿಕ್ಷಣ ವ್ಯವಸ್ಥೆ ಜ್ಯಾರಿಯಾದರೆ ಅದೇ ನಿಜವಾದ ಶಿಕ್ಷಣ ಮತ್ತು ಅದು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಪೀಠಮಾತೆ ಶ್ರೀಸರಸ್ವತೀ ದೇವಿಯ ಸನ್ನಿಧಿಯಲ್ಲಿ ಎಳೆಯ ಮಕ್ಕಳಿಗೆ ಮೊದಲ ಅಕ್ಷರ ಬರೆಸುವ ವಿದ್ಯಾರಂಭದ ಸಂದರ್ಭದಲ್ಲಿ ಸಂದೇಶ ನೀಡಿದರು.
ಮಕ್ಕಳಿಗೆ ಕಲಿಸಿ ಮಕ್ಕಳನ್ನು ಬೌಧಿಕವಾಗಿ ಬೆಳೆಸಿ ನಮ್ಮ ಸಂಸ್ಕೃತಿಯ ಪ್ರತೀಕಗಳನ್ನಾಗಿಸುವುದು ಅತೀ ಅಗತ್ಯ, ಅಧ್ಯಯನ, ಮತ್ತು ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ. ಈ ಬಗ್ಗೆ ಹೆತ್ತವರು ಕಾಳಜಿವಹಿಸಬೇಕು. ಸಂಸ್ಕಾರ ಮತ್ತು ಶಿಕ್ಷಣ ಇವರೆಡೂ ಜತೆಗೆ ಸಾಗಬೇಕು. ಸಂಸ್ಕಾರ ರಹಿತ ಶಿಕ್ಷಣವು ಮಕ್ಕಳನ್ನು ಕೇವಲ ಸಾಕ್ಷರರನ್ನಾಗಿಸುತ್ತದೆ ಬದಲಾಗಿ ಸನ್ನಡತೆ, ಉತ್ತಮ ಗುಣ, ವರ್ತನೆ ಇರುವ ಶಿಕ್ಷಣವಂತರನ್ನಾಗಿಸುವುದಿಲ್ಲ. ಆದುದರಿಂದ ಧಾರ್ಮಿಕ ತಳಹದಿಯ ಮೇಲೆ ಶಿಕ್ಷಣವು ಮೂಡಿದರೆ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಹಿಂದಿನ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಗುತ್ತಿತ್ತು. ಅಂದು ಮನೆಯಲ್ಲಿ ನಮ್ಮ ಭಾರತೀಯ ಸನಾತನ ಸಂಸ್ಕೃತಿಯ ಸಂಸ್ಕಾರದ ಭೋದನೆ ಅರಿವು ಅವರಿಗೆ ನೀಡಲಾಗುತ್ತಿತ್ತು. ಆದರೆ ಇಂದು ಇದಕ್ಕೆ ವಿಪರೀತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಕ್ಕಳಿಗೆ ಶಾಲೆಯಲ್ಲಿ ನಮ್ಮ ಸಂಸ್ಕ್ರತಿ ಗೆ ವಿರುದ್ದವಾದ ಪಾಶ್ಚಾತ್ಯ ಮತ್ತು ನಮ್ಮ ಸ್ವಧರ್ಮ ವಿರೋಧಿ ಸಂಸ್ಕಾರದ ಮಾರ್ಗದರ್ಶನ ದೊರೆಯುತ್ತಿದೆ. ಶಿಕ್ಷಣವನ್ನು ಹೆತ್ತವರು ಮನೆಯಲ್ಲಿ ನೀಡಬೇಕಾದ ಪರಿಸ್ತಿತಿ ನಿರ್ಮಾಣವಾಗುತ್ತಿದೆ. ಶಾಲೆಯಲ್ಲಿ ದೊರೆಯುವ ಇಂದಿನ ಸಂಸ್ಕಾರದ ಬಗ್ಗೆ ಹೆತ್ತವರು ಜಾಗರೂಕರಾಗಬೇಕಿದೆ.ಮಕ್ಕಳು ನಮ್ಮ ನಿಯಂತ್ರಣದಿಂದ ತಪ್ಪಿದರೆ ಮತ್ತೆ ಮರುಗಿ ಪ್ರಯೋಜನವಿಲ್ಲ ಎಂದು ಅವರು ಎಚ್ಚರಿಸಿದರು.
ವಿಜಯದಶಮಿಯ ಪರ್ವದಿನದಂದು ಮಹಾಸಂಸ್ಥಾನದಲ್ಲಿ ಶ್ರೀ ಸರಸ್ವತೀ ಯಜ್ಞವು ಬ್ರಹ್ಮಶ್ರೀ ಪುರೋಹಿತ್ ಅಕ್ಷಯ ಶರ್ಮಾ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು. ವಿಜೇತ್ ಆಚಾರ್ಯ ಕನ್ಯಾನ, ಅಭಿರಾಮ್ ಆಚಾರ್ಯ ಉಕ್ಕುಡ, ಗೌಶಿ ಆಚಾರ್ಯ ಉಕ್ಕುಡ, ಆಶಿತ ಅರುಣ್ ಆಚಾರ್ಯ ಮೂಡಬಿದ್ರೆ, ದ್ರುವ ಹರಿಶ್ಚಂದ್ರ ಆಚಾರ್ಯ, ಲಕ್ಷ್ಮೀಶ ನಾಗೇಂದ್ರ ಆಚಾರ್ಯ ಇಡಗುಂಜಿ ಇವರು ಯಜ್ಞದ ಬಳಿಕ ಜಗದ್ಗುರುಗಳವರ ಮಹಾಸನ್ನಿಧಾನ ಮತ್ತು ಪರಮಾಶೀರ್ವಾದದೊಂದಿಗೆ ಪೀಠಮಾತೆ ಶ್ರೀ ಸರಸ್ವತೀ ಪಾವನ ಸನ್ನಿಧಿಯಲ್ಲಿ ತಮ್ಮ ಹೆತ್ತವರ ಮಡಿಲಲ್ಲಿ ಮೊದಲಕ್ಷರಕ್ಕೆ ಶ್ರೀಕಾರವಿತ್ತರು. ಬಳಿಕ ಜಗದ್ಗುರುಗಳವರಿಗೆ ಗುರು ಪಾದುಕಾ ಪೂಜೆಯನ್ನು ನೆರವೇರಿಸಲಾಯಿತು.
ವಿದ್ಯಾರಂಭ ಸಮಾರಂಭದಲ್ಲಿ ಕನ್ಯಾನ ಜನಾರ್ಧನ ಆಚಾರ್ಯ, ಬಿ. ಯಜ್ಞೇಶ ಆಚಾರ್ಯ ಮಂಗಳೂರು ಹಾಗೂ ಶಿಲ್ಪಾ ವಾದಿರಾಜ ಆಚಾರ್ಯ, ಲಕ್ಷ್ಮಣ ಆಚಾರ್ಯ ಮಂಗಳೂರು, ಜಗದೀಪ್ ವೈ ಆಚಾರ್ಯ ಮಂಗಳೂರು, ಗೋಪಾಲಕೃಷ್ಣ ಆಚಾರ್ಯ ನೀರ್ಚಾಲು, ಪುರುಶೋತ್ತಮ ಆಚಾರ್ಯ ಮಂಗಳೂರು, ಮುಂತಾದವರು ಬಾಗವಹಿಸಿದ್ದರು. ಮಹಾಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಟಪಾಡಿ ಇವರು ಮಹಾಸಂಸ್ಥಾನದಲ್ಲಿ ತೆನೆ ತುಂಬುವ ಕಾರ್ಯಕ್ರಮವನ್ನು ನೆರವೇರಿಸಿದರು.ಇದೇ ವೇಳೆ ಮಾಜಿ ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಇವರು ಕಾಷ್ಠಶಿಲ್ಪದ ಕುಸುರಿ ಗಳನ್ನೊಳಗೊಂಡ ಸಿಂಹಾಸನವನ್ನು, ಹಾಗೂ ಮಹಾಸಂಸ್ಥಾನದ ಮೇಲ್ಛಾವಣಿಯನ್ನು ಪೂರ್ತಿಗೊಳಿಸಿ ತಮ್ಮ ಕೊಡುಗೆಯಾಗಿ ಜಗದ್ಗುರುಗಳವರಿಗೆ ಸಮರ್ಪಿಸಿದರು.
ವರದಿ ಮತು ಚಿತ್ರಗಳು : ರತನ್ ಕುಮಾರ್ ಹೊಸಂಗಡಿ
