ಮಂಜುಶ್ರೀ ನ್ಯೂಸ್ ಉಡುಪಿ
ನಮ್ಮ ಪ್ರತಿನಿಧಿ / ವರದಿ.
ಉಡುಪಿ ಪಡುಕುತ್ಯಾರು:- ಬೆಂಗಳೂರಿನ ಸಾಂಪ್ರದಾಯಿಕ ಶಿಲ್ಪ ಗುರುಕುಲ ಕೇಂದ್ರ ಕಾಲೇಜಿನ ಪ್ರಧಾನ ಗುರುಗಳಾಗಿ ಡಾ. ಜಿ. ಜ್ಞಾನಾನಂದ ಅವರ ಅವಧಿ ವಿಸ್ತರಣೆ ಹಾಗೂ ಗುರುಕುಲ ಕೇಂದ್ರದ ಅವಧಿ ವಿಸ್ತರಣೆ ಬಗ್ಗೆ ಸಚಿವ ವಿ. ಸುನೀಲ್ ಕುಮಾರ್ ಅವರಿಗೆ ಆನೆಗುಂದಿ ಮಹಾಸಂಸ್ಥಾನದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಶಿಲ್ಪಕಲೆಗೆ ವಿಶ್ವಕರ್ಮರ ಕೊಡುಗೆಯೇ ಇಂದು ಭಾರತವು ವಿಶ್ವದ ಆಕರ್ಷಣೀಯ ಪ್ರವಾಸೀ ತಾಣವಾಗಲು ಕಾರಣ. ಭಾರತದಲ್ಲಿರುವ ಎಲ್ಲಾ ಶಿಲ್ಪ ಕಲೆಗಳಿಗೂ ಶಾಸ್ತ್ರೋಕ್ತವಾದ ಪರಂಪರೆ, ಶೈಲಿ ಮತ್ತು ವಾಸ್ತು ವಿನ್ಯಾಸವಿದೆ. ಅದರಲ್ಲೂ ಕರ್ನಾಟಕದ ಶಿಲ್ಪಕಲಾವೈಭವಗಳು ಅತ್ಯಪೂರ್ವ, ಅದ್ಭುತವಾಗಿ ಜನಮನಸೂರೆಗೊಂಡಿದೆ. ಈ ಕರ್ನಾಟಕ ಶಿಲ್ಪ ಶೈಲಿಯು ಉಳಿಯುವಿಕೆಗಾಗಿ ಮತ್ತು ಕರ್ನಾಟಕದ ಶಿಲ್ಪಿಗಳಿಗೆ ಪ್ರೋತ್ಸಾಹ ಮತ್ತು ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಕರ್ನಾಟಕದ ಸಾಂಪ್ರಾದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ ಕಾಲೇಜು, ದೇವಾಲಯಶಿಲ್ಪ ಮತ್ತು ಮೂರ್ತಿಶಿಲ್ಪವನ್ನು ಬೋಧಿಸುವಂತಹ ಏಕೈಕ ಕಾಲೇಜು ಆಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಕಾಲೇಜಿಗೆ ಪಠ್ಯಕ್ರಮವನ್ನು ರಚಿಸಿ ಪ್ರಧಾನ ಗುರುಗಳಾಗಿ ಮುನ್ನಡೆಸಿದವರು ಅಪಾರ ಶಿಲ್ಪ ಜ್ಞಾನವುಳ್ಳವರಾದಂತಹ ಡಾ.ಜಿ. ಜ್ಞಾನಾನಂದರು ಎನ್ನುವ ಶಿಲ್ಪಶಾಸ್ತ್ರದ ಜ್ಞಾನ ವಿಶ್ವಕೋಶ ಎನ್ನುವುದೂ ವಿಶ್ವಬ್ರಾಹ್ಮಣ ಸಮಾಜಕ್ಕೆ ಅತೀವ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಸಾಂಪ್ರಾದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ ಕಾಲೇಜು ಪ್ರಾರಂಭಗೊಂಡದ್ದು
ಉಡುಪಿಯ ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪರಮಾಪ್ತ ಶಿಷ್ಯರಾಗಿದ್ದ ಉಡುಪಿಯ ದಿ.ಡಾ ವಿ. ಎಸ್ ಆಚಾರ್ಯ ಅವರ ಆಸಕ್ತಿಯಿಂದ ಮಾತ್ರ ಸಾಧ್ಯವಾಯಿತು ಎನ್ನುವುದನ್ನು ಈ ವೇಳೆ ನೆನಪಿಸಿಕೊಳ್ಳುತ್ತೇವೆ.
ಇತ್ತೀಚೆಗಿನ ಸರಕಾರದ ಆದೇಶದಂತೆ ಇದೀಗ ಅವಧಿ ಕೊನೆಗೊಂಡಿರುವ ಪ್ರಸ್ತುತ ಶಿಲ್ಪ ಗುರುಕುಲವು ಸ್ವತಂತ್ರ ಸರ್ಕಾರದ ಕಾಲೇಜು ಆಗಿ ಮಾರ್ಪಡುವ ಅಂತಿಮ ಹಂತದಲ್ಲಿರುವುದರಿಂದ ಈಗಿನ ಗುರುಕುಲದ ಅವಧಿ, ಮತ್ತು ಪ್ರಧಾನ ಗುರುಗಳ ಅವಧಿಯನ್ನು ಮುಂದುವರಿಸುವುದು ಅತೀ ಅಗತ್ಯವಾಗಿರುತ್ತದೆ ಹಾಗೂ ಗುರುಕುಲದ ಉದ್ದೇಶ ಈಡೇರಲು ಇದು ಸಹಕಾರಿಯಾಗುತ್ತದೆ. ಈಗಿನ ಗುರುಕುಲದ ಅವಧಿ ಮತ್ತು ಶಿಲ್ಪಶಾಸ್ತ್ರದ ಬಗ್ಗೆ ಹಲವು ಗ್ರಂಥಗಳನ್ನು ನಿಖರವಾಗಿ ರಚಿಸಿ ಶಿಲ್ಪಶಾಸ್ತ್ರದ ಬಗ್ಗೆ ಇದಮಿತ್ತಂ ಎಂದು ಅಧಿಕಾರಯುತವಾಗಿ ಹೇಳಬಲ್ಲ ಡಾ.ಜಿ. ಜ್ಞಾನಾನಂದಾರವರೇ ಪ್ರಧಾನ ಗುರುಗಳಾಗಿ ಮುಂದುವರಿಯಬೇಕೆನ್ನುವುದು ಜಗದ್ಗುರುಗಳವರ ಅಪೇಕ್ಷೆಯಾಗಿದೆ.
ಆದುದರಿಂದ ಜಗದ್ಗುರುಗಳವರ ಅಪೇಕ್ಷೆಯಂತೆ ಈಗಿನ ಗುರುಕುಲದ ಅವಧಿ ಮತ್ತು ಡಾ.ಜಿ. ಜ್ಞಾನಾನಂದರವರೇ ಗುರುಕುಲದ ಪ್ರಧಾನ ಗುರುಗಳಾಗಿ ಮುಂದುವರಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿ ವಿನಮ್ರವಾಗಿ ವಿನಂತಿಸುತ್ತೇವೆ. ಎಂದು ಮಹಾಸಂಸ್ಥಾನ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಆನೆಗುಂದಿ ಪ್ರತಿಷ್ಠಾನದ ವಿಶ್ವಸ್ವರಾದ ಹರೀಶ್ ಆಚಾರ್ಯ ಕಾರ್ಕಳ, ಅರವಿಂದ ಆಚಾರ್ಯ ಉಡುಪಿ ಇವರು ಸಚಿವರನ್ನು ಭೇಟಿ ಮಾಡಿ ಮಹಾಸಂಸ್ಥಾನದ ಮನವಿಯನ್ನು ನೀಡಿ ಈ ಬಗ್ಗೆ ಮನವರಿಕೆ ಮಾಡಿದರು.
