ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಬಲ್ಲ ಅಧ್ಯಾಪಕರನ್ನು ನೇಮಕ ಮಾಡಿ : ಕಮಲಾಕ್ಷಿ. ಕೆ.
ಅಂಗಡಿಮೊಗರು : ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಭಾಷೆ ಅರಿಯದ ಮಲಯಾಳಿ ಅಧ್ಯಾಪಕರನ್ನು ನೇಮಕ ಮಾಡಿದ ಶಿಕ್ಷಣ ಇಲಾಖೆಯ ಆದೇಶವನ್ನು ತಕ್ಷಣವೇ ರದ್ದು ಪಡಿಸುವಂತೆ ಆಗ್ರಹಿಸಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ. ಕೆ. ಅವರು ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಲೋಕಸೇವಾ ಆಯೋಗದ ಪರೀಕ್ಷೆಯ ಮೂಲಕ ಕನ್ನಡ ಮೀಸಲಾತಿ ಹುದ್ದೆಗೆ ಕನ್ನಡ ಭಾಷೆ ಅರಿಯದ ಅಧ್ಯಾಪಕರನ್ನು ನೇಮಕ ಮಾಡಿರುವುದು ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ಚೆಲ್ಲಾಟವಾಡುವ ಪ್ರಕ್ರಿಯೆಯಾಗಿದೆ ಎಂದು ಅವರು ಆಪಾದಿಸಿದ್ದಾರೆ. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಲ್ಲ ಅಧ್ಯಾಪಕರನ್ನು ಮಾತ್ರವೇ ನೇಮಕ ಮಾಡಬೇಕು, ಕನ್ನಡ ಮೀಸಲಾತಿ ಹುದ್ದೆಗೆ ಕನ್ನಡ ಭಾಷೆಯ ಗಂಧಗಾಳಿ ಅರಿಯದ ಅಧ್ಯಾಪಕರನ್ನು ನೇಮಕ ಮಾಡಿರುವುದು ಕಾನೂನು ವಿರುದ್ಧ ಪ್ರಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಾಸರಗೋಡು ಗಡಿ ನಾಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಕೇರಳ ಸರಕಾರ ಕೂಡಲೇ ಈ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡು ಕನ್ನಡ ಮೀಸಲಾತಿ ಹುದ್ದೆಗೆ ಕನ್ನಡಬಲ್ಲ ಅಧ್ಯಾಪಕರನ್ನು ಮಾತ್ರವೇ ನೇಮಕಾತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಅಂಗಡಿಮೊಗರು ಜಿಎಚ್ ಎಸ್ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ತರಗತಿಗೆ ಕೊಟ್ಟಾಯಂನ ಮಲಯಾಳಿ ಅಧ್ಯಾಪಕರ ನೇಮಕಾತಿಯಾಗಿದ್ದು ಈ ಅಧ್ಯಾಪಕರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವಾಗ ಇವರ ನೇಮಕಾತಿ ಪ್ರಕ್ರಿಯೆ ಹೇಗಾಯಿತು ಎಂಬುದನ್ನು ಅವರು ಪ್ರಶ್ನಿಸಿದ್ದಾರೆ. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಲ್ಲ ಅಧ್ಯಾಪಕರನ್ನು ಮಾತ್ರವೇ ನೇಮಕ ಮಾಡುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಕಳೆದ 4 ವರ್ಷಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಈ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು ಸರಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಈ ಪ್ರಕರಣದ ಬಗ್ಗೆ ಕೂಲಂಕುಶವಾದ ತನಿಖೆಯನ್ನು ಮಾಡಬೇಕೆಂದು ಅವರು ಮುಖ್ಯಮಂತ್ರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಿದ್ದಾರೆ.
