ಮಂಜೇಶ್ವರ: ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಸ್ಥಾನವಿದೆ. ಮನುಷ್ಯನ ಮನಸ್ಸು ಚಂಚಲ ಸ್ವಭಾವದಾಗಿದ್ದು, ಪ್ರತಿಯೊಬ್ಬರು ಸದ್ಬವನಾ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಎಲ್ಲಾ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಆಧ್ಯಾತ್ಮಿಕತೆಯಲ್ಲಿ ಅಡಗಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಿನ್ನೆ ಸಂಜೆ "ಶ್ರೀ ಸುದರ್ಶನ ವೇದಿಕೆ" ಯಲ್ಲಿ ನಡೆದ ದ್ವಿತೀಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಶೀರ್ವಚನವಿತ್ತರು.
ಮಾನವನ ಜೀವನದಲ್ಲಿ ಕಲೆ, ಸಾಹಿತ್ಯ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕಿನ ಸಾರ್ಥಕತೆಗೆ ಭದ್ರವಾದ ಬುನಾದಿಯಾಗುತ್ತದೆ. ಪ್ರಸ್ತುತ ವಾತಾವರಣದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಮಾನವನ ಬದುಕು ಕೇವಲ ಹೊಟ್ಟೆಪಾಡಿಗಾಗಿ ಸೀಮಿತವಾಗದೇ ಸಾಮಾಜಿಕ ಕಳಕಳಿಯ ಸೇವಾ ಮನೋಭಾವದ ಸಾಂಸ್ಕೃತಿಕ ಚಟುವಟಿಕೆಗಳಿಂದ ಜೀವನಕ್ಕೆ ಪರಿಪೂರ್ಣತೆ ಲಭಿಸುತ್ತದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕೋಲ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷರಾದ ವೇ. ಮೂ. ಬೋಳಂತಕೋಡಿ ಶ್ರೀ ರಾಮಭಟ್, ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಲರಾಮ ಭಟ್ ಕಾಕುಂಜೆ, ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಅಧ್ಯಕ್ಷರಾದ ವೀರಭಾಸ್ಕರ ಶೆಟ್ಟಿಗಾರ್, ಕುಂಜತ್ತೂರು ದೀಕ್ಷಾ ವುಡ್ ಮಾಲಕರಾದ ಬಾಲಕೃಷ್ಣ, ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ಬಾಗ್, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಪ್ರಣಾಮ್ ಶೆಟ್ಟಿ ತಲೆಕಳ ಪ್ರಾರ್ಥನೆ ಹಾಡಿ, ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್.ಎನ್ ಕಡಂಬಾರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಂಬರ ಕೋಡಿಜಾಲು ಸ್ವಾಗತಿಸಿ, ವೇದಿಕೆ ಸಮಿತಿ ಪದಾಧಿಕಾರಿಗಳಾದ ಸದಾನಂದ ಶೆಟ್ಟಿ ತಲೆಕಲ ಹಾಗೂ ಸಂಕಬೈಲು ಸತೀಶ್ ಅಡಪ ಮತ್ತು ಹರೀಶ್ ಶೆಟ್ಟಿ ಧರ್ಮೇಮಾರ್ ಕಾರ್ಯಕ್ರಮ ನಿರೂಪಿಸಿ, ಹರೀಶ್ ಶೆಟ್ಟಿ ಮಾಡ ವಂದಿಸಿದರು.
ಭಜನಾ ಕಾರ್ಯಕ್ರಮಕ್ಕೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂದಿರ ಕಡಂಬಾರು ಇವರಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ನಡೆಯಿತು.
ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಮಕ್ಕಳ ಮೇಳ, ಯಕ್ಷ ಬಳಗ ವರ್ಕಾಡಿ ಇವರಿಂದ "ಜಾಂಬವತಿ ಕಲ್ಯಾಣ" ಎಂಬ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಕ್ಷೇತ್ರಕ್ಕೆ ಆಗಮಿಸಿದ ಮಂಜೇಶ್ವರದ ಶಾಸಕರಾದ ಎ.ಕೆ.ಎಂ ಅಶ್ರಫ್ ರವರನ್ನ ಕ್ಷೇತ್ರದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ6 ಸ್ವಾಗತಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್. ಎನ್ ಕಡಂಬಾರು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ರಾವ್ ಕಡಂಬಾರು, ಹರೀಶ್ ಶೆಟ್ಟಿ ಕಡಂಬಾರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಜಕೋಡಿ ಫ್ರೆಂಡ್ಸ್ ಕಜಕೋಡಿ ಇವರ ಪ್ರಾಯೋಜಕತ್ವದಲ್ಲಿ ವಿಜಯ ಕುಮಾರ್ ಕೋಡಿಯಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ "ಶಿವದೂತೆ ಗುಳಿಗೆ" ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
_✍️ ವರದಿ: ಶ್ರೀ ರತನ್ ಕುಮಾರ್ ಹೊಸಂಗಡಿ._
_📸 ಚಿತ್ರಗಳು: ಶ್ರೀ ದೀಪಕ್ ರಾಜ್ ಉಪ್ಪಳ._
*ಪತ್ರಿಕಾ/ ದೃಶ್ಯ ಮಾಧ್ಯಮ ಸಮಿತಿ ಬ್ರಹ್ಮಕಲಶೋತ್ಸವ.*













