ಉಪ್ಪಳ: ಧರ್ಮ ಎಂಬ ಶಬ್ದದ ಅರ್ಥ ಮತ್ತು ವ್ಯಾಪ್ತಿ ವಿಶಾಲವಾದುದು, ಧಾರಣ ಮತ್ತು ಪೋಷಣ ತತ್ವ ಹೊಂದಿರುವ ಧರ್ಮವು ಲೋಕದ ಕಲ್ಯಾಣವನ್ನು ಬಯಸುತ್ತದೆ. ಮೀಮಾಂಸಕರು ಯಾಗಾದಿಗಳನ್ನು ವೇದಧರ್ಮ ಎಂದರೆ, ಆಗಮಶಾಸ್ತ್ರಜ್ಞರು ವಿಧಿವತ್ತಾಗಿ ದೇವರನ್ನು ಪೂಜಿಸುವುದೇ ಧರ್ಮ ಎಂದರು. ಯಾವುದರ ಮೂಲಕ ಮೋಕ್ಷ ಪ್ರಾಪ್ತಿಯಾಗುತ್ತದೋ ಅದು ಧರ್ಮ ಎಂದು ಖುಷಿವರ್ಯರು ತಿಳಿಸಿದ್ದಾರೆ. ವಿವಿಧ ಆಚರಣೆ, ಸಂಸ್ಕಾರ ಸಂಸ್ಕೃತಿಗಳ ಮೂಲಕ ದೇಶವು ಸಮೃದ್ಧವಾಗಿದೆ. ಇಲ್ಲಿ ಯಾವುದನ್ನು ಟೀಕಿಸಬಾರದು, ಪ್ರಶ್ನಿಸಬಾರದು ಎಂದು ಹೇಳಿಲ್ಲ. ಹಾಗಾಗಿ ಭಾರತೀಯ ಧಾರ್ಮಿಕ ಪ್ರಪಂಚ ವಿಶ್ವಕ್ಕೆ ಮಾದರಿಯಾಗಿದೆ ಎಂದು ವಿದ್ವಾನ್ ವೆಂಕಟೇಶ ಭಟ್ ಹಿರಣ್ಯ ನುಡಿದರು. ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲದ ಪುನರ್ ನಿರ್ಮಾಣ ಮತ್ತು ಅಷ್ಟಬಂಧ ಬ್ರಹ್ಮಕಲಶದ ನಾಲ್ಕನೇ ದಿನವಾದ ಸೋಮವಾರದಂದು ಧಾರ್ಮಿಕ ಉಪನ್ಯಾಸ ನೀಡಿದರು. ದೇಶದಲ್ಲಿ ಯಾವುದೇ ಶಸ್ತ್ರದ ಮೂಲಕವಾಗಲಿ, ದಬ್ಬಾಳಿಕೆಯ ಮೂಲಕವಾಗಲಿ ಧರ್ಮವು ಹೇರಲ್ಪಟ್ಟಿಲ್ಲ. ಬಹುತ್ವದ ನೆಲದಲ್ಲಿ ಜೈನರು, ಬೌದ್ಧರು, ಪಾರ್ಸಿಗಳು, ಬಹಾಯಿಗಳು, ಯಹೂದಿಗಳು ಇದ್ದಾರೆ. ಸೆಮಿಟಿಕ್ ಧರ್ಮಕ್ಕೂ ಭಾರತೀಯ ಧರ್ಮಗಳಿಗೂ ಬಹಳ ವ್ಯತ್ಯಾಸವಿದೆ. ಸೆಮಿಟಿಕ್ ಮತಗಳಲ್ಲಿ ಒಂದೇ ಮತಗ್ರಂಥ, ಓರ್ವ ಸ್ಥಾಪಕನಿದ್ದು, ಆ ಮತ ಹುಟ್ಟಿದ ಕಾಲವಿದ್ದರೆ, ಭಾರತೀಯ ಸನಾತನ ಧರ್ಮ ಪರಂಪರೆ ಅಕಾಲವಾಗಿದೆ. ಇಲ್ಲಿ ಹಲವು ಧರ್ಮಗ್ರಂಥಗಳಿದ್ದು ವಿಸ್ತಾರ್ಯವಾಗಿದೆ, ಇಲ್ಲಿ ಆತ್ಮ ಸಾಕ್ಷಾತ್ಕಾರದ ತುಡಿತವನ್ನು ಹೆಚ್ಚಿಸುವ ಆಧ್ಯಾತ್ಮದ ಬಲವೂ ಇದೆ ಎಂದರು. ಕ್ರಿ.ಪೂ 1000 ದಲ್ಲಿ ಭರತಭುವಿಯಲ್ಲಿ 21 ವೇದ ಸಂಹಿತೆಗಳಿದ್ದವು. ಆದರೆ ವರ್ತಮಾನದಲ್ಲಿ ಒಂದೇ ಒಂದು ಖುಗ್ವೇದ ಸಂಹಿತೆಯನ್ನು ನೋಡಬಹುದಾಗಿದೆ. ಪತಂಜಲಿಯ ಕಾಲಘಟ್ಟದಲ್ಲಿ ಹಲವು ಖುಗ್ವೇದಗಳಿದ್ದ ಬಗ್ಗೆ ಉಲ್ಲೇಖವಿದೆ. ನಮ್ಮಲ್ಲಿ ವಿವಿಧ ಆರಾಧನಾ ಪದ್ಧತಿಗಳಿದ್ದು, ಎಲ್ಲವೂ ಭಕ್ತಿಯನ್ನು ಸೃಜಿಸುತ್ತವೆ. ಶೈವಾಗಮದಲ್ಲಿ ಶಿವನ ಆರಾಧನಾ ಕ್ರಮಗಳ ಬಗ್ಗೆ ಮಾಹಿತಿ ಇದ್ದರೆ, ವೈಷ್ಣವಾಗಮವು ವಿಷ್ಣುವಿನ ಆರಾಧನಾ ಕ್ರಮಗಳನ್ನು ಉಲ್ಲೇಖಿಸುತ್ತದೆ. ಕೌಮಾರಾಗಮನವು ಸ್ಕಂದ ಯಾ ಸುಬ್ರಹ್ಮಣ್ಯನ ಆರಾಧನಾ ಕ್ರಮಗಳನ್ನು ವರ್ಣಿಸುತ್ತದೆ. ಬಹುತ್ವದ ಹರಿವುಳ್ಳ ಭಾರತೀಯ ಧರ್ಮ ಪರಂಪರೆಯ ಬಗ್ಗೆ ವಿದೇಶಿಗರು ಆಸಕ್ತರಾಗಿ ಇಲ್ಲಿನ ಧರ್ಮ ವಿಜ್ಞಾನದ ಬಗ್ಗೆ ತಿಳಿದು ಆ ಪಥದಲ್ಲಿಯೇ ಹೆಜ್ಜೆಯಿಟ್ಟ ಹಲವು ಉದಾಹರಣೆಗಳಿವೆ. ಆದರೆ ನಮ್ಮ ಮಧ್ಯೆ ಇರುವ ಕೆಲ ಮಂದಿ ಇದರಲ್ಲಿ ಏನೂ ಇಲ್ಲ, ತಾನು ಹಿಂದೂವಲ್ಲ ಕೇವಲ ಭಾರತೀಯ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಭಾರತೀಯತೆಯೊಳಗಿರುವ ಸಾತ್ವಿಕ, ಅದ್ಭುತ ಜ್ಞಾನ ಪರಂಪರೆಯನ್ನು ಅವರು ತಿಳಿದರೆ ಈ ಭುವಿ ಧನ್ಯವಾದೀತು ಎಂದರು.
ಎಲ್ಲರಿಗೂ ಪಥ್ಯವಾಗುವ ಹಿಂದೂ ಧರ್ಮದ ವಿದ್ಯೆ ಕೆಲವರಿಗೆ ಯಾಕೆ ಅಪಥ್ಯವಾಗುತ್ತದೆ ಎಂದು ಪ್ರಶ್ನಿಸಿದರು. ಧರ್ಮಾನಂದ, ಆರ್.ಸಿ ಮಜುಂದಾರ್ ನಂತಹ ಸಾಹಿತಿಗಳು ದೇಶದ ಧಾರ್ಮಿಕ ಇತಿಹಾಸದ ಬಗ್ಗೆ ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಸಾಂಸ್ಕೃತಿಕವಾಗಿ, ಸಾಹಿತಿಕವಾಗಿ ಬಹಳ ಸಮೃದ್ಧವಾಗಿರುವ ಭಾರತದಲ್ಲಿ ಪ್ರತಿ ಕುಲಕ್ಕೂ ಕುಲದೇವ, ಗ್ರಾಮಕ್ಕೆ ಗ್ರಾಮದೇವ ಇರುವುದು ವಿಶೇಷ. ಇಂತಹ ಪರಂಪರೆ ಬೇರೆಲ್ಲೂ ಇಲ್ಲ ಎಂದರು. ಸುಬ್ರಹ್ಮಣ್ಯನು ನಾದದ ಅಧಿದೇವತೆ, ನಮ್ಮೆಲ್ಲ ಮಾತಿನ ಮೂಲಶಕ್ತಿ ಸುಬ್ರಹ್ಮಣ್ಯ, ವೇದಸಾರದಲ್ಲೂ, ತೈತ್ತರೀಯ ಉಪನಿಷತ್ತಿನಲ್ಲೂ ಸುಬ್ರಹ್ಮಣ್ಯನ ಸ್ತುತಿಯಿದೆ, ಆತ ಸುಜ್ಞಾನದ ಅಧಿಪತಿಯಾಗಿದ್ದಾನೆ. ಈತನ ಜ್ಞಾನಧಾರೆಗೆ ನಮಿಸಿ ಎಲ್ಲರೂ ಸಂಭ್ರಮಿಸೋಣ ಎಂದರು. ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದ ಕುಟುಂಬ ಪ್ರಭೋದಿನಿ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ ಭಾರತ ದೇಶದ ಹಿರಿಮೆ ಇರುವುದು ನಮ್ಮ ಜೀವನ ಮೌಲ್ಯಗಳಲ್ಲಿ, ಸಂಸ್ಕೃತಿಯ ಮೌಲ್ಯಗಳು ಮನೆಯಿಂದ ಆರಂಭವಾಗಿ ನಮ್ಮ ಮನಗಳನ್ನು ಬೆಳಗಬೇಕು. ಧಾರ್ಮಿಕ ಶಿಕ್ಷಣದ ಮೂಲಕ ಮನೆಯು ವಿದ್ಯಾಲಯ, ಆದರಾಲಯ,ಸೇವಾಲಯಗಳಾಗಬೇಕೆಂದರು. ವೇದಮೂರ್ತಿ ಜಯರಾಮ ಚಿಂಚಳಕರ್ ಕಾಶಿ ಸದನ ಮಂಗಳೂರು ಮಾತನಾಡಿ ಧರ್ಮದ ಪುನರುತ್ಥಾನವು ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾದ ದೇಗುಲಗಳಿಂದಾಗುತ್ತದೆ. ವರ್ತಮಾನದಲ್ಲಿ ಲೋಕಕ್ಕೆ ಎರುಗಿದ ಕಂಟಕಗಳು ಶ್ರೀದೇವರ ಕೃಪೆಯಿಂದ ಇಲ್ಲವಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣಪತಿ ಭಟ್ ಕೆ.ಎಂ- ನಮ್ಮ ಮನಸ್ಸಿನ ಶಕ್ತಿ ಅಗಾಧವಾದುದು. ಆದರೆ ಇದನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ. ಧ್ಯಾನ, ಭಕ್ತಿ ಮಾರ್ಗದಿಂದ ಇದಕ್ಕೆ ಸರಿಯಾದ ದಿಶೆಯನ್ನು ತೋರಬಹುದು. ಆಧುನಿಕ ಪೀಳಿಗೆ ಎಲ್ಲವನ್ನು ಪ್ರಶ್ನೆ ಮಾಡುತ್ತದೆ. ದೇವನಿದ್ದಾನೋ ಎಂಬ ಪ್ರಶ್ನೆಗೆ ಸ್ವಂತ ಅನುಭವಗಳಿಂದಷ್ಟೇ ಉತ್ತರ ಕಂಡುಕೊಳ್ಳಬಹುದು. ಭಕ್ತಿ ಮತ್ತು ಪ್ರಯತ್ನದಿಂದ ಎಲ್ಲವೂ ಸಿದ್ಧಿಸುತ್ತದೆ. ನಿಯಮಿತ ದಿನಚರಿಯು ಉತ್ತಮ ಬಾಳ್ವೆಗೆ ರಹದಾರಿಯಾಗಿದ್ದು, ದಿನಕ್ಕೊಮ್ಮೆ ದೇಗುಲಗಳಿಗೆ ತೆರಳಿ ಶ್ರೀದೇವರ ದರ್ಶನವನ್ನು ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳೋಣ ಎಂದರು. ಮಹಾಲಿಂಗೇಶ್ವರ ದೇವಸ್ಥಾನ, ಬಜಕೂಡ್ಲು ಇದರ ಆಡಳಿತ ಮೊಕ್ತೇಸರ ಕೆ.ಕೃಷ್ಣ ಶ್ಯಾನುಭೋಗ್, ಪೈವಳಿಕೆ ಗ್ರಾ.ಪಂ ಸದಸ್ಯೆ ಜಯಲಕ್ಷ್ಮೀ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ದೇಗುಲದ ಆಡಳಿತ ಮೊಕ್ತೇಸರ ಮಾಧವ ವಿ ಭಟ್ ಉಪಸ್ಥಿತರಿದ್ದರು. ಗಣ್ಯರಿಗೆ ಬ್ರಹ್ಮಕಲಶ ಸಮಿತಿ ವತಿಯಿಂದ ಶ್ರೀದೇವರ ಪ್ರಸಾದ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀರಾಮಮೂರ್ತಿ ವಾಟೆತ್ತಿಲ ಸ್ವಾಗತ ಭಾಷಣ ಮಾಡಿದರು. ರಮಾನಂದ ಕೆದುಕೋಡಿ ಪ್ರಾರ್ಥನೆ ಹಾಡಿದರು. ಪುಷ್ಪಾಲಕ್ಷ್ಮೀ ಧನ್ಯವಾದವಿತ್ತರು. ಚಂದ್ರಶೇಖರ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಏರ್ಪಟ್ಟಿತು. ಬೆಳಗ್ಗೆ 7 ರಿಂದ 10 ಗಂಟೆಯವರಗೆ ವಿವಿಧ ತಂಡಗಳಿಂದ ಭಜನ ಕಾರ್ಯಕ್ರಮ ಏರ್ಪಟ್ಟಿತು.
ಕ್ಷೇತ್ರದ ವೈದಿಕ ಕಾರ್ಯಕ್ರಮದ ಭಾಗವಾಗಿ ಪ್ರಾತಃಕಾಲ ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಪಾಣಿವಾದನ, ಅನುಜ್ಞಾ ಬ್ರಹ್ಮಕಲಶಾಭಿಷೇಕ, ಪದ್ಮೋಲ್ಲೇಖನ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಯ ನಂತರ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಏರ್ಪಟ್ಟಿತು.


