ಮಂಜೇಶ್ವರ: ಷಟ್ಪತ ರಸ್ತೆ ನಿರ್ಮಾಣದ ಹಿನ್ನಲೆಯಲ್ಲಿ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಮಹಾದ್ವಾರದ ತೆರವುಗೊಳಿಸುವ ಕಾರ್ಯ ಇಂದು ಅಪರಾಹ್ನ ನಡೆಯಿತು.
ಸುಮಾರು 30 ವರ್ಷದ (1986ರಲ್ಲಿ) ಹಿಂದೆ ಅಂದಿನ ಜೀರ್ಣೋದ್ದಾರ ಸಮಿತಿ ಸುಮಾರು ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಈ ಮಹಾದ್ವಾರ ಉದ್ಯಾವರ ಮಾಡ ಕ್ಷೇತ್ರದ ಕೇಂದ್ರ ಬಿಂದುವಾಗಿತ್ತು. ಉತ್ಸವದ ವೇಳೆ ಆಮಂತ್ರಣ ಪತ್ರಿಕೆ, ಸಾಮಾಜಿಕ ಜಾಲತಾಣಗಳ ಪ್ರಚಾರದ ವೇಳೆ ಇದೇ ದ್ವಾರದ ಫೋಟೋ ಉಪಯೋಗಿಸಿದರೆ ಕೇವಲ ದ್ವಾರದ ಫೋಟೋ ನೋಡಿಯೇ ಉದ್ಯಾವರ ಮಾಡ ಕ್ಷೇತ್ರದೆಂದೇ ಭಕ್ತರಿಗೆ ಅರಿವಾಗುತಿತ್ತು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಕೂಡಾ ಈ ದ್ವಾರ ಕಂಡ ಕೂಡಲೇ ಉದ್ಯಾವರ ಮಾಡ ತಲುಪಿದೆ ಎಂದು ದೈವಗಳಿಗೆ ಕೈ ಮುಗಿಯುತ್ತಿದ್ದರು.
ಇದೇ ದ್ವಾರದ ಮೂಲಕ ಪ್ರಸಿದ್ದಿ ಪಡೆದ ಕ್ಷೇತ್ರಗಳಾದ ಕಟೀಲು, ಪೊಳಲಿ, ಗೆಜ್ಜೆಗಿರಿ ಹಾಗೂ ಇನ್ನಿತರ ಕಡೆಗಳಿಗೆ ಬ್ರಹ್ಮಕಲಶ ವೇಳೆ ಮಂಜೇಶ್ವರ ಭಾಗದ ಹೊರೆಕಾಣಿಕೆ ಇಲ್ಲಿಂದಲೇ ಹೊರಡುತ್ತಿತ್ತು. ಬ್ರಹ್ಮಕಲಶೋತ್ಸವದ ಸಮಿತಿಯವರು ಒಂದುಗೂಡಿ, ದ್ವಾರದ ಮುಂಭಾಗ ನಿಂತು ದೈವಗಳಲ್ಲಿ ಪ್ರಾರ್ಥಿಸಿ, ತೆಂಗಿನಕಾಯಿ ಹೊಡೆದು ಹೊರೆ ಕಾಣಿಕೆ ಹೊರಟ ದಿನಗಳಿವೆ. ಪ್ರತೀ ವರುಷ ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ವೇಳೆ ಇದೇ ದ್ವಾರದ ಮುಂಭಾಗ ಊರ ಜನತೆ ದೇವರನ್ನ ಸ್ವಾಗತಿಸಿ, ಆರತಿ ಬೆಳಗುತ್ತೀದ್ದರು.
ಅಲ್ಲದೇ ಪ್ರತೀ ವರುಷ ಉದ್ಯಾವರ ಮಾಡ ದೈವಗಳ ಉತ್ಸವ ವೇಳೆ ಈ ದ್ವಾರಕ್ಕೆ ಹೊಸ ಬಣ್ಣ ಬಳಿದು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಉತ್ಸವಕ್ಕೆ ವಿಶೇಷ ಕಳೆ ನೀಡುತ್ತಿದ್ದವು. ಈ ಮಹಾದ್ವಾರವನ್ನ ಇತ್ತೀಚೆಗೆ ನಡೆದ ಉತ್ಸವ ವೇಳೆ ಪೂರ್ವಭಾವಿಯಾಗಿ ತೆರವುಗೊಳಿಸುವ ಹಂತಕ್ಕೆ ತಲುಪಿತ್ತು.
ಆದರೆ ರಾಷ್ಟ್ರೀಯ ಹೆದ್ದಾರಿಯ ಕಾಮಾಗಾರಿ ಪಡಕೊಂಡ ಕಂಪೆನಿಯವರು ಉತ್ಸವ ಸಮಿತಿಯವರೊಂದಿಗೆ ಚರ್ಚಿಸಿ, ಉತ್ಸವ ಕಳೆದ ಬಳಿಕ ತೆರವುಗೊಳಿಸುವುದಾಗಿ ತಿಳಿಸಿದ ಕಾರಣ ಇಂದು ಅಪರಾಹ್ನ ವೇಳೆ ಬುಲ್ಡೋಜರ್ ಬಳಸಿ ದ್ವಾರವನ್ನು ನೆಲಕ್ಕುರುಳಿಸಲಾಯಿತು. ಇನ್ನು ಜನತೆಯಲ್ಲಿ ಈ ದ್ವಾರ ಕೇವಲ ನೆನಪು ಮಾತ್ರವಾಗಿ ಉಳಿಯಲಿದೆ. ಉದ್ಯಾವರ ಮಾಡ ತಲುಪಿತೆಂದರೆ ಈ ದ್ವಾರವನ್ನು ನೆನೆಯುತ್ತಿದ್ದ ಜನತೆ ದ್ವಾರ ಮಾಯವಾದ ಬಳಿಕ ಇನ್ನುಮುಂದೆ "ಉದ್ಯಾವರ ಮಾಡ"ದ ಗುರುತು ಇಡಿಯುವುದು ಸ್ವಲ್ಪ ಕಷ್ಟವಾಗಲಿದೆ.
✍️ ರತನ್ ಕುಮಾರ್ ಹೊಸಂಗಡಿ.
📸: ಸೌಪರ್ಣಿಕಾ ಮಾಡ.
📸: ರತನ್ ಕುಮಾರ್ ಹೊಸಂಗಡಿ.

