ಮಂಜೇಶ್ವರ:- ತುಳುನಾಡಿನ ಜನರು ಕೆಡ್ಡಸ ಹಬ್ಬವನ್ನು ಪರಂಪರೆಯ ಪ್ರಕಾರ ಆಚರಿಸುತ್ತಿದ್ದಾರೆ. ಭೂಮಿ ತಾಯಿಯು ಮೈನೆರೆದು ಫಲವಂತಿಕೆಗೆ ತಾಯಿಯಾಗಿರುವುದೇ ಇದಕ್ಕೆ ಕಾರಣ ಇದನ್ನ ತುಳುನಾಡಿನ ಎಲ್ಲರೂ ಅರಿತುಕೊಂಡು ಮುಂದಿನ ಪೀಳಿಗೆಗೆ ಈ ಆಚರಣೆಯನ್ನ ಉಳಿಸಿ ಸಮಾಜಕ್ಕೆ ಅರಿವನ್ನ ಮೂಡಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದು ಜೈ ತುಳುನಾಡು (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್ ನುಡಿದರು.
ಅವರು ತುಳು ಭಾಷೆ ಹಾಗೂ ಹಿಂದಿನ ತಲೆಮಾರಿನ ಆಚಾರ - ವಿಚಾರಗಳನ್ನ ಇಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜೈ ತುಳುನಾಡು (ರಿ.) ಕಾಸರಗೋಡು ಸಂಘಟನೆಯ ನೇತೃತ್ವದಲ್ಲಿ ಕುಂಬಳೆ ಬಳಿಯ ಕಳತ್ತೂರು ನಲ್ಲಿರುವ "ಶ್ರೀ ಲಲಿತಾಂಬ" ನಿವಾಸದ ಸಭಾಂಗಣದಲ್ಲಿ ಇಂದು ಸಂಜೆ ನಡೆದ "ತುಳುನಾಡ ಕೆಡ್ಡಸ ಪರ್ಬೊ" ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕೇರಳ ತುಳು ಅಕಾಡೆಮಿಯ ಅಧ್ಯಕ್ಷ:- ಉಮೇಶ್ ಸಾಲ್ಯಾನ್ ಕಾಸರಗೋಡು ವಹಿಸಿದ್ದರು. ವೇದಿಕೆಯಲ್ಲಿ ಮಂಚಿಕೊಳ್ನಾಡ್ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ತುಳು ಸಂಶೋಧಕಿ, ಕಾದಂಬರಿಗಾರ್ತಿ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ, ಬಂಬ್ರಾಣ ಯಜಮಾನ ಬಂಬ್ರಾಣ ಮೋಹನ್ ದಾಸ್ ರೈ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಲತಾ ಪಿ. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಜೈ ತುಳುನಾಡಿನ ತುಳು ವಿಕಿಪಿಡಿಯಾದ ಸಂಪಾದಕಿ ಶ್ರೀಮತಿ ವಿನೋದ್ ಪ್ರಸಾದ ರೈ ಕಾರಿಂಜ ಕೆಡ್ಡಸದ ಬಗ್ಗೆ ಮಾಹಿತಿ ನೀಡಿದರು.
ಕು. ವೃದ್ಧಿ ಆಳ್ವ ಕಳತ್ತೂರು ತುಳು ಭಕ್ತಿಗೀತೆ ಹಾಡಿ, ಜೈ ತುಳುನಾಡು (ರಿ.) ಕಾಸರಗೋಡು ಸಂಘಟನೆಯ ಅಧ್ಯಕ್ಷರಾದ ಹರಿಕಾಂತ್ ಕಾಸರಗೋಡು ಸ್ವಾಗತಿಸಿ, ಜತೆ ಕಾರ್ಯದರ್ಶಿ:- ಶ್ರೀನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಯಜ್ಞೆಶ್ ಕಿಳಿಂಗಾರ್ ವಂದಿಸಿದರು.
ಕೆಡ್ಡಸ ಎಂದರೆ ಮೂರು ದಿನ ಭೂಮಿ ತಾಯಿಯು ಋತುಮತಿಯಾಗುವ ದಿನವಾಗಿದೆ. ಭೂಮಿ ತಾಯಿಯು ಋತುಸ್ತ್ರಾವವಾದಾಗ ತುಳುನಾಡಿನ ಹಿಂದಿನ ಹಿರಿಯರು ಪಾರಂಪರಿಕವಾಗಿ ಕೆಡ್ಡಸವನ್ನ ಹೇಗೆ ಆಚರಿಸುತ್ತಾರೆ ಎಂಬುದನ್ನ ಈ ವೇಳೆ ಪ್ರಾತ್ಯಕ್ಷಿಕೆ ಮೂಲಕ ಶ್ರೀನಿವಾಸ ಆಳ್ವ ರವರ ಮನೆಯವರು ತಿಳಿಯಪಡಿಸಿದರು.
ಚಿತ್ರ ಮತ್ತು ವರದಿ : ರತನ್ ಕುಮಾರ್ ಹೊಸಂಗಡಿ
