ಕೇರಳ ವಿಧಾನಸಭಾ ಚುನಾವಣೆ. ತಲಪಾಡಿಯಲ್ಲಿ ವಾಹನಗಳ ತಪಾಸಣೆ. ತಪಾಸಣೆ ವೇಳೆ ಕೆಟ್ಟು ನಿಂತ ಕಾರನ್ನು ದೂಡಿದ ಜಿಲ್ಲಾಧಿಕಾರಿ.
ಮಂಜೇಶ್ವರ:- ಮುಂಬರುವ ಏಪ್ರಿಲ್ 6 ರಂದು ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಪ್ರಯುಕ್ತ ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡದಿಂದ ವಾಹನಗಳ ತಪಾಸಣೆ ಇಂದಿನಿಂದ ನಡೆಯುತ್ತಿದೆ. ಎ.6 ರಂದು ಕೇರಳದಾದ್ಯಂತ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ವಾಹನಗಳಲ್ಲಿ ಅಕ್ರಮ ಹಣ, ಮದ್ಯ, ನಿಷೇಧಿತ ವಸ್ತುಗಳ ಸಾಗಾಟವನ್ನು ಪತ್ತೆಹಚ್ಚುವ ಸಲುವಾಗಿ ಮೇಲಿನ ತಲಪಾಡಿಯಲ್ಲಿ ತಪಾಸಣೆ ನಡೆಯಿತು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬುರವರು ಕೇರಳದಲ್ಲಿ ಎಪ್ರಿಲ್ 6 ರಂದು ನಡೆಯಲಿರುವ ಚುನಾವಣೆ ಪ್ರಯುಕ್ತ ಕಾಸರಗೋಡು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಗಡಿಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಸಿ. ಆರ್ ಪಿ.ಎಫ್, ಶ್ವಾನ ದಳ, ಬಾಂಬ್ ಸ್ಕ್ವಾಡ್ , ಸಾಂಖ್ಯಿಕ ಇಲಾಖೆ, ಪ್ಲೈಯಿಂಗ್ ಸ್ಕ್ವಾಡ್, ಸ್ಪೆಷಲ್ ಸ್ಕ್ವಾಡ್ ನೇತೃತ್ವದಲ್ಲಿ ಕಾಸರಗೋಡಿನಾದ್ಯಂತ 20 ಚೆಕಿಂಗ್ ಪಾಯಿಂಟ್ಸ್ ಕಾರ್ಯಾಚರಿಸಲಿದೆ. ಇದರಲ್ಲಿ 17 ಚೆಕಿಂಗ್ ಪಾಯಿಂಟ್ ಕರ್ನಾಟಕದ ಗಡಿಭಾಗದಲ್ಲಿ ಕಾರ್ಯಾಚರಿಸಲಿದೆ. ಚುನಾವಣೆ ಮುಗಿಯುವವರೆಗೆ ದಿನದ 24 ಗಂಟೆಯೂ ಕೂಡಾ ನಡೆಯಲಿರುವ ತಪಾಸಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ತಪಾಸಣೆ ಮುನ್ನ ವಿಶೇಷ ಸಭೆ:
ಚುನಾವಣೆಯನ್ನು ಸ್ವತಂತ್ರ, ಸುರಕ್ಷೆ ಸಹಿತವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗಳ ಅಧಿಕಾರಗಳೊಂದಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಇಂದು ಬೆಳಿಗ್ಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಂಗಳೂರು, ಕೊಡಗು, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದರು. ಗಡಿ ಪ್ರದೇಶಗಳಲ್ಲಿ ತಪಾಸಣೆ ಕಡ್ಡಾಯಗೊಳಿಸಲಾಗುವುದು. ಪೊಲೀಸ್, ಅಬಕಾರಿ, ಕಂದಾಯ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸುವರು. ಶಾಶ್ವತ ಅಪರಾಧಿಗಳ ಮಾಹಿತಿ ಸಂಗ್ರಹಿಸಿ ಗಡಿ ಪ್ರದೇಶಗಳು ಪರಸ್ಪರ ಹಸ್ತಾಂತರ ನಡೆಸಲು ಸಭೆ ನಿರ್ಧರಿಸಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಸಹಾಯಕ ಅಬಕಾರಿ ಕಮೀಷನರ್ ಬಾಬು ವರ್ಗೀಸ್, ಕಸ್ಟಂಸ್ ಕಮೀಷನರ್ ಇಮಾಮುದ್ದೀನ್ ಅಹಮ್ಮದ್, ಆದಾಯ ತೆರಿಗೆ ಅಧಿಕಾರಿ ಪ್ರೀತಾ ನಂಬ್ಯಾರ್, ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್, ಎಸ್.ಪಿ., ಡೆಪ್ಯೂಟಿ ಅಬಕಾರಿ ಕಮೀಷನರ್, ಕಣ್ಣೂರು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎನ್.ದೇವಿದಾಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ , ಎಸ್.ಪಿ., ಮಂಗಳೂರು ಅಬಕಾರಿ ಕಮೀಷನರ್, ಕಸ್ಟಂಸ್ ಕಮೀಷನರ್, ಆದಾಯ ತೆರಿಗೆ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.
ಕೆಟ್ಟು ನಿಂತ ಕಾರು ದೂಡಿದ ಜಿಲ್ಲಾಧಿಕಾರಿ.
ಸರಳತೆಗೆ ಹೆಸರಾಗಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ .ಸಜಿತ್ ಬಾಬುರವರು ತಲಪಾಡಿಯಲ್ಲಿ ತಪಾಸಣೆ ಸಂದರ್ಭ ಕೆಟ್ಟು ನಿಂತ ಕಾರನ್ನು ಪೊಲೀಸ್ ಅಧಿಕಾರಿ ಜತೆಗೆ ತಾವೇ ಖುದ್ದು ದೂಡಿ ಸರಳತೆಯನ್ನು ಮೆರೆದರು. ಜಿಲ್ಲಾಧಿಕಾರಿ ತಪಾಸಣೆ ಕೈಗೊಂಡ ಸಂದರ್ಭ ಕಾರೊಂದನ್ನು ನಿಲ್ಲಿಸಲು ಸೂಚಿಸಿದರು. ಆದರೆ ನಿಂತ ಕಾರು ವಾಪಸ್ಸು ಸ್ಟಾರ್ಟ್ ಆಗದೇ ಕೆಟ್ಟು ನಿಂತಿತು. ಚಾಲಕ ಪರದಾಡುವುದನ್ನು ಕಂಡ ಜಿಲ್ಲಾಧಿಕಾರಿ ಸಜಿತ್ ಬಾಬು ನೇರ ಕಾರಿನ ಬಳಿ ಬಂದು ತಮ್ಮ ಜತೆಗಿದ್ದ ಪೊಲೀಸ್ ಅಧಿಕಾರಿಯ ಜತೆಗೆ ಸೇರಿಕೊಂಡು ಕಾರನ್ನು ದೂಡಿ ಸಹಕರಿಸಿದರು.
