ಕೊಡವ ರೈಡರ್ಸ್ ಕ್ಲಬ್ ಹುದಿಕೇರಿ, ಕೊಡಗು ಬಲಿಜ ಸಮಾಜ, ಗೋಣಿಕೊಪ್ಪಲು ಸುದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶುಶ್ರೂಷಕಿಯರು ಹಾಗೂ ಕೊರೋನಾ ಪಾಸಿಟಿವ್ ಪೀಡಿತ ಕುಟುಂಬಗಳ ಮನೆ ಮನೆಗೆ ತೆರಳಿ ಇಂದು ಸುಮಾರು 55ಕುಟುಂಬಗಳಿಗೆ ಅಕ್ಕಿ, ಸಕ್ಕರೆ, ತೊಗರಿ ಬೇಳೆ, ಅರಶಿನ, ಮೆಣಸು, ಸಂಬಾರ ಪುಡಿ, ಅಡುಗೆ ಎಣ್ಣೆ, ಉಪ್ಪು ಇತ್ಯಾದಿಗಳನ್ನು ಒಳಗೊಂಡ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಕೊಡಗು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್, ನಿರ್ದೇಶಕರಾದ ನಾಪೋಕ್ಲು ಟಿ.ವಿ.ಭವಾನಿ, ಪೊನ್ನಂಪೇಟೆ ಯ ಟಿ.ಆರ್.ವಿಜಯ, ನಾಪೋಕ್ಲು ಅಂಗನವಾಡಿ ಕಾರ್ಯಕರ್ತೆ ಆಶಾಲತ ಬಲಿಜ, ಪೊನ್ನಂಪೇಟೆಯ ಟಿ.ವಿ.ಹೇಮಾವತಿ, ಟಿ.ಎಸ್.ಚಿಂತನ್ ಮುಂತಾದವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಅರ್ಹ ಫಲಾನುಭವಿಗಳನ್ನು ಬಲಿಜ ಉತ್ಸಾಹಿ ಯುವತಿಯರಾದ ಭವಾನಿ ಮತ್ತು ಆಶಾಲತಾ ಆಯ್ಕೆ ಮಾಡಿ ಸಂಘಟಕರ ಮೆಚ್ಚುಗೆಗೆ ಪಾತ್ರರಾದರು.
ನಾಪೋಕ್ಲುವಿನ ಹಳೇ ತಾಲ್ಲೂಕು ಶ್ರೀ ಭಗವತಿ ದೇವಸ್ಥಾನ, ಕೊಳಕೇರಿ, ಬೇತು, ಇಂದಿರಾ ನಗರ, ಚೆರಿಯಪರಂಬು, ಕಲ್ಲು ಮೊಟ್ಟೆಗೆ ತೆರಳಿ ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಕೊಡವ ರೈಡರ್ಸ್ ಕ್ಲಬ್ ಟ್ರಸ್ಟಿ , ಕಿರುತೆರೆ ನಟ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸಣ್ಣುವಂಡ ದರ್ಶನ್ ಕಾವೇರಪ್ಪ, ಕ್ಲಬ್ ಅಧ್ಯಕ್ಷ ಮುರುವಂಡ ಗೌತಮ್, ಗ್ರಾ.ಪಂ.ಪಿಡಿಓ ಚೋಂದಕ್ಕಿ, ಸದಸ್ಯರಾದ ಅರುಣ್ ಬೇಬ, ಬಿ.ಎಂ.ಪ್ರತೀಪ ಮುಂತಾದವರು ಉಪಸ್ಥಿತರಿದ್ದರು. ಕೇವಲ ಬಲಿಜ ಕುಟುಂಬಗಳಲ್ಲದೆ ಅರ್ಹ ಇತರೆ ಬಡ ಕುಟುಂಬಗಳಿಗೂ ವಿತರಿಸಲಾಯಿತು.
ಇದೇ ಸಂದರ್ಭ ಬಲಿಜ ಸಮಾಜ ನಿರ್ದೇಶಕಿ ಔಷಧಿ ಕಿಟ್ ಬೇಡಿಕೆ ಮುಂದಿಟ್ಟಿದ್ದು, ಮುಂದೆ ಔಷಧಿಯನ್ನೂ ವಿತರಿಸಲು ವ್ಯವಸ್ಥೆ ಮಾಡಲಾಗುವದೆಂದು ಸುದ್ದಿ ಸಂಸ್ಥೆ ಹಾಗೂ ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಭರವಸೆ ನೀಡಿದರು. ಶ್ರೀ ಭಗವತಿ ದೇವಸ್ಥಾನದಲ್ಲಿ ಪಿಡಿಓ ಚೋಂದಕ್ಕಿ ಅವರು ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿದ್ದರು.
