ಹಸಿವು ಎಂಬುದು ಉಸಿರಿನ ನೋವು
ದನಿ ಎತ್ತಿದರೆ ಸಾವು! ದನಿ ಬಿಟ್ಟರೂ ಸಾವು!!
ನರ ನಾಡಿಗಳು ಸ್ತಬ್ಧ-ನಿಶಬ್ಧ
ಬೆನ್ನಿಗಂಟಿದ ದೇಹ
ತಲೆ ಒಣಗಿದ ಕುಂಬಳಕಾಯಿ ಕೈ-ಕಾಲುಗಳು ಒಣಗಿದ ಬಳ್ಳಿ ಥರ
ಕರುಳ ಬಳ್ಳಿಗೆ ಅನ್ನದ ದರುಶನವಿಲ್ಲದೆ
ದಿನ-ವಾರ ಕಳೆದಿದೆ
ಕಣ್ಣು ಕತ್ತಲೆಯ ಗೂಡಾಗಿವೆ
ನಿಲ್ಲಲು ನಡೆಯಲು ಶಕುತಿ ಎಂಬುದು ಗಾಳಿ ಮಾತಾಗಿದೆ
ಹಸಿವೆ ಎಂದರೇನು? ಎಂಬುದು ಈ ಅಕ್ಷರಗಳಲಿ ಹೇಗೆ ಮೂಡಿಸಲೇ ತಾಯೀ...
ಶಕುತಿ ಇಲ್ಲದೆ ಬರೆದ ಅಕ್ಷರಗಳು ಮುರುಟಿ ಹೋಗುತ್ತಿವೆ
ಹಸಿವನ್ನು ಗಾಢವಾಗಿ ಪ್ರತಿಬಿಂಬಿಸುತ್ತಿವೆ
ಗತ್ತು ಗಮ್ಮತ್ತು ಮಣ್ಣು ಸೇರಿವೆ
ಮನೆಯಲಿ ನೋಣಗಳು ಅನ್ನದ ಅಗಳು ಅರಸಿ ಹೋಗಿವೆ
ಮನ,ಮನೆ ಅಕ್ಷರಶಃ ಸ್ಮಶಾನ ಮೌನ ಆವರಿದೆ
ಹಸಿವೆಯನು ಯಾವ ಅಕ್ಷರದಿ ಬರೆದು ಹೇಳಲೇ...
ಹಾಡಲೇ...
ಅನ್ನದ ಅಗಳು ಬೆರಳಿಗೆ ತಗುಲಿದ ಕ್ಷಣವೇ
ಹಬ್ಬದ ಸಂಭ್ರಮ ಕಣ್ಣಲ್ಲಿ ಸಾವಿರ ಸಾವಿರ ಚಂದ್ರಮರ ಬೆಳದಿಂಗಳು ಮನವಾಳುವುದು
ಲೇಖನ : ಶ್ರೀ ಬೆಂಗಳೂರು
