ಬೆಟ್ಟದಂತಹ ಕಷ್ಟ ಬರಬಹುದು ಬಾಳಿನಲಿ
ದಟ್ಟ ಅಡವಿಯ ಕೂಡ ದಾಟಬೇಕಿಹುದು
ಕೆಟ್ಟ ಅನುಭವವೂ ಆಗಬಹುದೊಮ್ಮೊಮ್ಮೆ
ದಿಟ್ಟತನ ಇರಬೇಕು ಇದುವೇ ಜೀವನ…
ಸಲ್ಲದಾ ಯೋಚನೆಗಳು ಮನವ ಕದಡುವುದು
ಇಲ್ಲದುದರೆಡೆಗೇ.ಮನವೆಂದೂ ತುಡಿಯುವುದು
ಎಲ್ಲರಿಗೂ ಬಗೆಬಗೆಯ ನೋವು ನಲಿವಿಹುದು
ಕಲ್ಲಿನಂತೆಯೇ ಇರಬೇಕು, ಇದುವೇ ಜೀವನ…
ಏಳು ಬೀಳುಗಳುಂಟು ಬದುಕಿನ ಪಯಣದಲಿ
ಕೂಳು ಕೂಡ ದೊರೆಯದು ಹಲವರಿಗೆ ಇಲ್ಲಿ
ಹಾಳು ಜೀವನವೇಕೆ ಎನಿಸಬಹುದೊಮ್ಮೊಮ್ಮೆ
ತಾಳುತಲೇ ಬದುಕಬೇಕು, ಇದುವೇ ಜೀವನ…
ಸಹಜರೆಯು ಒಮ್ಮೊಮ್ಮೆ ಮರೆಯಾಗಬಹುದು
ಅಹಮಿಕೆಯು ಪುಟಿಪುಟಿದು ಮೇಲೇಳಬಹುದು
ಸಹನೆಯು ಮರೆಯಾಗಿ ಹಾನಿಯಾಗಲಹುದು
ಸಹಿಸಬೇಕೆಲ್ಲವನೂ, ಇದುವೇ ಜೀವನ...
ಹೂವಿನ ಜೊತೆಯಲೇ ಮುಳ್ಳುಂಟು ಸೃಷ್ಟಿಯಲಿ
ಬೇವಿನೊಂದಿಗೆ ಬೆಲ್ಲವಿರಲು ಸೊಗ ಬದುಕಲಿ
ಸಾವಿರ ಚಿಂತೆಗಳ.ನಡುವೆಯೂ ನಗುವಿರಲಿ
ಸಾವಿರದು ಸಂತಸಕೆ, ಇದುವೇ ಜೀವನ…
ಲೇಖನ : ಶ್ರೀ ಬೆಂಗಳೂರು
