ಪತ್ರಿಕೋದ್ಯಮದ ಸ್ವರೂಪ ದಿನೇ ದಿನೇ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಪತ್ರಿಕಾ ದಿನ ಅತ್ಯಂತ ಪ್ರಸ್ತುತವಾದದ್ದು. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ತನ್ನ ಜವಾಬ್ದಾರಿಯನ್ನು ಎತ್ತಿಹಿಡಿಯುವುದು ನಮ್ಮ ಸಮಾಜದ ಒಳಿತಿಗೆ ಬಹಳ ಮುಖ್ಯವಾಗಿದೆ. ಎಲ್ಲಾ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನದ ಶುಭಾಶಯಗಳು.
ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಇದು ಸವಾಲಿನ ಕೆಲಸವೂ ಹೌದು.ಅಷ್ಟೇ ಜವಾಬ್ದಾರಿಯುತ ಕೆಲಸವೂ ಕೂಡಾ ಹೌದು. ರಾಜ್ಯದ ಕೆಲ ವಿವಿಗಳಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಸ್ಟುಡಿಯೋಗಳು ನೆನೆಗುದಿಗೆ ಬಿದ್ದಿವೆ. ವಿಭಾಗದ ನಿರ್ಲಕ್ಷ್ಯ, ಸಿಬ್ಬಂದಿ, ಹಣಕಾಸಿನ ಸಮಸ್ಯೆ ಹೀಗೆ ಮುಂತಾದ ಸಮಸ್ಯೆಯಿಂದ ಸರ್ಕಾರಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೇವಲ ತರಗತಿಗಷ್ಟೇ ಸೀಮಿತ ಆಗುತ್ತಿದ್ದಾರೆ. ಇದು ದೊಡ್ಡ ದುರಂತನೇ ಸರಿ.ಕೂಡಲೇ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮಾತ್ರವಲ್ಲ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದರ ಬಗ್ಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಕೂಡಾ ಬಂದಿದೆ. ಹಣ ಬಿಡುಗಡೆಗೊಂಡರೂ ಸೌಲಭ್ಯ ಕಲ್ಪಿಸದ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ನಿರ್ಲಕ್ಷ್ಯ ತೋರಿರೋ ವಿವಿಗಳ ಪತ್ರಿಕೋದ್ಯಮ ವಿಭಾಗಗಳಿಗೆ ಮರುಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಕೂಡಾ ಬಂದಿದೆ. ಸರ್ಕಾರಿ ಕಾಲೇಜುಗಳಿಗಿಂತ ಕೆಲ ಖಾಸಗಿ ಕಾಲೇಜುಗಳಲ್ಲಿ ಮಾತ್ರ ಪತ್ರಿಕೋದ್ಯಮ ಶಿಕ್ಷಣದಲ್ಲಿ ಕಲಿಕೆ, ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಎಲ್ಲಿ ಹೋದರೂ ಸೈ ಅನಿಸಿಕೊಳ್ಳುತ್ತಾರೆ. ಇಂತಹ ಪತ್ರಿಕೋದ್ಯಮ ತರಬೇತಿ ನೀಡುವ ಕೆಲಸ ಎಲ್ಲಾ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಆಗಬೇಕಾಗಿದೆ. ಮಾರುಕಟ್ಟೆ ವ್ಯಾಪ್ತಿ ಕಡಿಮೆಯಿರುವುದರಿಂದ ಸ್ಪರ್ಧೆ ಜಾಸ್ತಿಯಿರುವುದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸವಾಲನ್ನು ಎದುರಿಸುತ್ತಿದ್ದಾರೆ. ಇದನ್ನ ಸಮರ್ಥವಾಗಿ ಎದುರಿಸಬೇಕೆಂದರೆ ಕಲಿಕೆ ಮಟ್ಟದಲ್ಲೆೀ ಇದಕ್ಕೆ ಸಿದ್ಧತೆ ಮಾಡಬೇಕು. ಹೀಗಾದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೈ ಅನಿಸಿಕೊಳ್ಳಬಹುದು. ಗ್ಲಾಮರಸ್ ಕ್ಷೇತ್ರ ಅಂತಾ ಹೇಳಿ ಟಿವಿ ಚಾನೆಲ್ಗಳಿಗೆ ಬರುವವರಿಗೆ ಕಡಿವಾಣ ಹಾಕಬೇಕಾಗಿದೆ. ಪತ್ರಿಕೆ, ಟಿವಿ, ರೇಡಿಯೋಗಳಲ್ಲಿ ಕೆಲಸ ಮಾಡುವವರಿಗೆ ಆವರದ್ದೇ ಆದ ಪಾವಿತ್ರ್ಯತೆ ಇದೆ. ಮಾತ್ರವಲ್ಲ ಇದೊಂದು ಸಂವಿಧಾನದ ನಾಲ್ಕನೇ ಅಂಗವೂ ಹೌದು. ಹೀಗಾಗಿ ಇದಕ್ಕೆ ತನ್ನದೇ ಆದಂತಹ ಬದ್ಧತೆ, ಮೌಲ್ಯ ಇದೆ. ಇದನ್ನೆಲ್ಲಾ ಕಾಪಾಡುವ ಹೊಣೆಗಾರಿಕೆ ಹಿರಿಯ ಪತ್ರಕರ್ತರ, ಶಿಕ್ಷಣ ತಜ್ಞರ, ಶೈಕ್ಷಣಿಕ ಸಂಸ್ಥೆಗಳ ಮೇಲಿದೆ. ಇದನ್ನೆಲ್ಲಾ ಗಮನಿಸಿಕೊಂಡು ಶಿಕ್ಷಣ ತಜ್ಞರು ಪತ್ರಿಕೋದ್ಯಮ ಶಿಕ್ಷಣದ ಗುಣಮಟ್ಟದ ಹೆಚ್ಚಳದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ.ಷ
ಲೇಖನ : ಶ್ರೀ ಬೆಂಗಳೂರು
