ಮಂಜೇಶ್ವರ : ಹೊಸಂಗಡಿ ಬಳಿಯ ಪೋಸೋಟು ನಿವಾಸಿ ದಿ. ನಾರಾಯಣ ಶೆಟ್ಟಿ - ಕುಸುಮ ದಂಪತಿಯ ಪುತ್ರ ಗುರುಪ್ರಸಾದ್ (31) ಎಂಬವರನ್ನ ನಿನ್ನೆ ರಾತ್ರಿ ಅಸೌಖ್ಯ ನಿಮ್ಮಿತ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮದ್ಯೆ ಹೃದಯಾಘಾತದಿಂದ ನಿಧನರಾದರು.
ಗುರುಪ್ರಸಾದ್ ರವರು ಸಾರಣೆ ಕೆಲಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಮನೆ ಬಳಿಯ ಕೆಲಸದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಕಫ ಕಟ್ಟುವ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಮರಳಿ ಮನೆಗೆ ಬಂದ್ದಿದ್ದರು. ಸಂಜೆ ಟೀವಿ ವೀಕ್ಷಿಸುತ್ತಿದ್ದ ಇವರಿಗೆ ಉಸಿರಾಟದ ಸಮಸ್ಯೆ ಉಂಟಾಗಿ ಕೂಡಲೇ ಉಪ್ಪಳದ ಆಸ್ಪತ್ರೆಗೆ ದಾಖಲಾಗಿದ್ದರು. ಸಮಸ್ಯೆ ಉಲ್ಬಣಗೊಂಡ ಕಾರಣ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮದ್ಯೆ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ.
ಗುರುಪ್ರಸಾದ್ ಇವರು ಹೊಸಂಗಡಿಯ ಶ್ರೀ ಅಯ್ಯಪ್ಪ ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಮಾಜಿ ಸದಸ್ಯರಾಗಿದ್ದು, ಪ್ರಸ್ತುತ ಮಂಜೇಶ್ವರ ಕಣ್ವತೀರ್ಥದ ಆಂಜನೇಯ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರಾಗಿದ್ದರು. ಆಂಜನೇಯ ಫ್ರೆಂಡ್ಸ್ ಕ್ಲಬ್ ಹಗ್ಗಜಗ್ಗಾಟದಲ್ಲಿ ಇಡೀ ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದು, ಗುರುಪ್ರಸಾದ್ರವರು ಹಗ್ಗಜಗ್ಗಾಟದಲ್ಲಿ "ಸೊಂಟದ ಆಟಗಾರ" ಎಂದೇ ಖ್ಯಾತಿಯನ್ನು ಪಡೆದವರು. ವಿವಿಧ ಕಡೆಗಳಲ್ಲಿ ನಡೆದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ವಿಜಯಿಯಾಗಿ ಸುಮಾರು 30 ಕ್ಕೂ ಹೆಚ್ಚು ಬಹುಮಾನವನ್ನು ಪಡೆಯಲು ಪ್ರಮುಖರಾಗಿದ್ದರು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆಗಳಲ್ಲಿ ನಡೆದ ಪ್ರಮುಖ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ "ಸೊಂಟದ ಆಟಗಾರ"ರಲ್ಲಿ ಬೆಸ್ಟ್ ರೌಂಡರ್ ಪ್ರಶಸ್ತಿಯನ್ನೂ ಇವರು ಪಡೆದಿದ್ದರು.
ಇವರ ನಿಧನಕ್ಕೆ ಶ್ರೀ ಅಯ್ಯಪ್ಪ ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆ ಹಾಗೂ ಮಲ್ಟಿ ಜಿಮ್ ಹೊಸಂಗಡಿ, ಆಂಜನೇಯ ಫ್ರೆಂಡ್ಸ್ ಕ್ಲಬ್ ಕಣ್ವತೀರ್ಥ ತೀವ್ರ ಸಂತಾಪ ಸೂಚಿಸಿದೆ.
ವರದಿ : ರತನ್ ಕುಮಾರ್ ಹೊಸಂಗಡಿ
