ತಲಪಾಡಿ : ಕೇರಳದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ತೆರಳುವ ಎಲ್ಲಾ ಗಡಿಗಳಲ್ಲಿ ತಪಾಸಣೆಯನ್ನು ಇಂದಿನಿಂದ ಇನ್ನಷ್ಟು ಬಿಗಿಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಪ್ರಯಾಣಿಕರು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತೋರಿಸಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ನೆಗೆಟಿವ್ ವರದಿ ಇಲ್ಲದ ಪ್ರಯಾಣಿಕರನ್ನು ವಾಪಾಸು ಕಳುಹಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಚಪ್ಪರ ನಿರ್ಮಿಸಿ ತಪಾಸಣಾ ಕೇಂದ್ರವನ್ನು ತೆಗೆಯಲಾಗಿದೆ. ಮಂಗಳೂರು ಭಾಗಕ್ಕೆ ತೆರಳುವ ಎಲ್ಲಾ ವಾಹನವನ್ನು ತಪಾಸಣೆ ಮಾಡುತ್ತಿದ್ದು, ತುರ್ತು, ಘನ ವಾಹನಗಳಿಗೆ ತೆರಳಲು ಪ್ರತ್ಯೇಕ ತಾತ್ಕಾಲಿಕ ಕಬ್ಬಿಣದ ವಿಭಜಕವನ್ನು ನಿರ್ಮಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ, ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ನಗರ ಪೋಲಿಸ್ ಕಮೀಷನರ್ ಎಂ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಸ್ಥಳಕ್ಕೆ ತಲುಪಿದ್ದಾರೆ.
ಎಲ್ಲಾ ಗಡಿಗಳಲ್ಲೂ ಕಠಿಣ ತಪಾಸಣೆ
ತಲಪಾಡಿ ಮಾತ್ರವಲ್ಲದೆ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಎಲ್ಲಾ ಗಡಿಗಳಲ್ಲೂ ಈ ರೀತಿಯ ಕಠಿಣ ತಪಾಸಣೆ ನಡೆಸಲಾಗುತ್ತಿದೆ.
ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯದ ವಿರುದ್ಧ ಪ್ರತಿಭಟನೆ :
ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಕ್ಕೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯದ ವಿರುದ್ಧ ಜನಕೀಯ ವೇದಿಕೆ ಮಂಜೇಶ್ವರ ವತಿಯಿಂದ ಹೆದ್ದಾರಿಯ ಮದ್ಯೆ ಕುಳಿತು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ನೇತಾರ ಹರ್ಷಾದ್ ವರ್ಕಾಡಿ, ಸಿಪಿಎಂ ನೇತಾರ ಕೆ.ಆರ್ ಜಯಾನಂದ, ಯೂತ್ಲೀಗ್ ನೇತಾರರಾದ ಸಿದ್ದೀಕ್ ಮಂಜೇಶ್ವರ, ಸೈಫುಲ್ಲ ತಂಞ್ಞಳ್, ಮುಸ್ತಾಫ ಉದ್ಯಾವರ, ಎಸ್ಡಿಪಿಐ ನೇತಾರ ಹಮೀದ್ ಹೊಸಂಗಡಿ ಮುಂತಾದವರು ನೇತೃತ್ವ ವಹಿಸಿದರು. ಪ್ರತಿಭಟನೆಯಿಂದಾಗಿ ಕೆಲಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು
ಮೊಬೈಲ್ ಆರ್ಟಿಪಿಸಿಆರ್ ಕೇಂದ್ರ ತೆರೆಯಲು ತೀರ್ಮಾನ
ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯು ತಲಪಾಡಿ ಗಡಿಯಲ್ಲಿ ನಡೆಸುತ್ತಿದ್ದ ಆರ್ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನು ತೆರವು ಗೊಳಿಸಿದ ಬೆನ್ನಲ್ಲೇ ಕಾಸರಗೋಡು ಜಿಲ್ಲಾಡಳಿತವು ಮೊಬೈಲ್ ಆರ್ಟಿಪಿಸಿಆರ್ ಕೇಂದ್ರವನ್ನು ತೆರೆಯಲು ತೀರ್ಮಾನಿಸಿದೆ.
ವರದಿ ಮತ್ತು ಚಿತ್ರ : ರತನ್ ಕುಮಾರ್ ಹೊಸಂಗಡಿ
