ಉಡುಪಿ, ಪಡುಕುತ್ಯಾರು: ಆರೋಗ್ಯವೇ ನಿಜವಾದ ಸಂಪತ್ತು. ಆರೋಗ್ಯದಿಂದ ಇದ್ದು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಣಲು ಎಲ್ಲರೂ ಬಯಸುತ್ತಾರೆ. ಮಹಾಸಂಸ್ಥಾನದಲ್ಲಿ ಕೊರೋನಾಕ್ಕಿರುವ ಬೃಹತ್ ಮಟ್ಟದಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿರುವ ಕಾರ್ಯಕ್ರಮವನ್ನು ಬೆಂಗಳೂರಿನ ದಾನಿಗಳು ಪ್ರಾಯೋಜಿಸಿ ಎಲ್ಲರ ಆರೋಗ್ಯವನ್ನು ಕಾಪಾಡುವ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಾರ್ಹ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಎರಡು ದಿನಗಳ ಕಾಲ ಬೃಹತ್ ಮಟ್ಟದ ಉಚಿತ ಕೋವಿಡ್ ಲಸಿಕಾ ಚುಚ್ಚುಮದ್ದು ಶಿಬಿರವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾರ್ಥಕ ಬದುಕಿನ ಲಕ್ಷಣಗಳಲ್ಲಿ ಪರೋಪಕಾರವು ಅತೀ ಮಹತ್ವವಾದುದು. ನಮ್ಮಿಂದಾಗಿ ಇನ್ನೊಬ್ಬರ ಬದುಕಿಗೆ ಉಪಕಾರವಾದರೆ ಅದು ಶ್ರೇಷ್ಠ ಧರ್ಮ ಕಾರ್ಯ. ಅದುವೇ ಭಗವಂತನ ಆರಾಧನೆ. ಇಂತಹ ಸೇವೆಯನ್ನು ಮಠದ ಶಿಷ್ಯರಾದ ಬೆಂಗಳೂರಿನ ಕುಮಾರ ಆಚಾರ್ಯ, ನರಸಿಂಹ ಮೂರ್ತಿ ಆಚಾರ್ಯ, ವಿದ್ವಾನ್ ರಾಘವೇಂದ್ರ ಸ್ಥಪತಿಯವರು ಮಾಡುವುದರ ಮೂಲಕ ಸ್ತುತ್ಯರ್ಹ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಕೋವಿಡ್ ಲಸಿಕೆ ಚುಚ್ಚು ಮದ್ದು ತೆಗೆದುಕ್ಕೊಳ್ಳುವುದರಮೂಲಕ ನಮ್ಮ ಪ್ರಾಣ ಉಳಿಸುವುದರೊಂದಿಗೆ ಇತರರ ಪ್ರಾಣ ಉಳಿಸಬಹುದು. ಇಂತಹ ಮಹತ್ ಕಾರ್ಯಕ್ಕೆ ಪ್ರಾಯೋಜಕತ್ವ ನೀಡಿದ ದಾನಿಗಳಿಗೆ ಆಭಾರಿಗಳಾಗಿದ್ದೇವೆ ಎಂದು ನುಡಿದರು.
ವಿದ್ವಾನ್ ರಾಘವೇಂದ್ರ ಸ್ಥಪತಿ ಬೆಂಗಳೂರು ಅವರು ದಾನಿಗಳ ಪರವಾಗಿ ಮಾತನಾಡಿ ಸಮಾಜಕ್ಕೆ ತಮ್ಮಿಂದಾಗುವ ಸೇವೆಯನ್ನು ತಮ್ಮದಾದ ರೀತಿಯಲ್ಲಿ ಎಲ್ಲರೂ ಮಾಡಬಹುದು, ಅಂತಹ ಕಿಂಚಿತ್ ಸೇವೆಯನ್ನು ನಾವು ಸಹೋದರರು ಮಾಡುತ್ತಿದ್ದೇವೆ. ಅವಕಾಶಕೊಟ್ಟ ಮಹಾಸಂಸ್ಥಾನಕ್ಕೆ ಕೃತಜ್ಞತೆಯನ್ನು ಸಮರ್ಪಿಸುತ್ತೇವೆ ಎಂದು ನುಡಿದರು.
ವೇದಿಕೆಯಲ್ಲಿ ದಾನಿಗಳಾದ ಕುಮಾರ ಆಚಾರ್ಯ ಬೆಂಗಳೂರು, ನರಸಿಂಹ ಮೂರ್ತಿ ಆಚಾರ್ಯ ಬೆಂಗಳೂರು, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ .ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಕುತ್ಯಾರು ಗ್ರಾ. ಪಂ. ಅಧ್ಯಕ್ಷೆ ಹಾಗೂ ಶ್ರೀ ಸರಸ್ವತೀ ಮಾತೃ ಮಂಡಳಿ ಉಪಾಧ್ಯಕ್ಷೆ ಲತಾ ಎಸ್. ಆಚಾರ್ಯ , ಲಸಿಕಾ ಶಿಬಿರ ಹಾಗೂ ಚಾತುರ್ಮಾಸ್ಯ ಸಮಿತಿ ಕೋವಿಡ್ ನೋಡಲ್ ಅಧಿಕಾರಿ ದಿನೇಶ್ ಆಚಾರ್ಯ ಪಡುಬಿದ್ರಿ, ರೂಪೇಶ್ ಆಚಾರ್ಯ ಮಂಚಕಲ್ ಉಪಸ್ತಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಮಹಾಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಕಾಲ ನಡೆಯುವ ಉಚಿತ ಲಸಿಕಾ ಶಿಬಿರದಲ್ಲಿ ಮುಂಚಿತವಾಗಿ ನೋದಾಯಿಸಲಾದ ನಾಲ್ಕುಸಾವಿರ ಮಂದಿಗೆ ಉಚಿತವಾಗಿ ಕೋವಿಡ್ ಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ಬೆಳಗ್ಗೆ ಗಂಟೆ ಏಳರಿಂದ ಸಂಜೆ ಐದರ ವರೆಗಿನ ಕಾಲಾವಧಿಯನ್ನು ಒಂಭತ್ತು ವಿಭಾಗಗಳಾಗಿ ವಿಂಗಡಿಸಿ ಪ್ರತೀ ವಿಭಾಗದಲ್ಲಿ ಇನ್ನೂರು ಮಂದಿಯನ್ನು ಮುಂಚಿತವಾಗಿ ನೋಂದಾಯಿಸುವ ಪ್ರಕ್ರಿಯೆಯನ್ನು ಈಗಾಗಲೇ ನಡೆಸಲಾಗಿದೆ. ಬೆಂಗಳೂರಿನ ಸಕಾರಿಯಾ ಆಸ್ಪತ್ರೆಯ ಇಪ್ಪತ್ತೊಂದು ಮಂದಿಯ ಪರಿಣತ ವೈದ್ಯರ ತಂಡವು ಎರಡು ದಿನಗಳ ಶಿಬಿರದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಮಾಡುತ್ತಿದೆ. ಕಾರ್ಯಕ್ರಮದ ನೇತೃತ್ವವನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ವಹಿಸಿದ್ದು, ಆನೆಗುಂದಿ ಗುರುಸೇವಾ ಪರಿಷತ್, ಶ್ರೀ ಸರಸ್ವತೀ ಮಾತೃಮಂಡಳಿ ಹಾಗೂ ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯವರು ಸಹಕಾರ ನೀಡುತ್ತಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ
