ಕಾಸರಗೋಡು: ಕರ್ನಾಟಕಕ್ಕೆ ಪ್ರಯಾಣಿಸಲು ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲಾ ಪಂಚಾಯತುಗಳಲ್ಲಿ ಟೆಸ್ಟಿಂಗ್ ಕೇಂದ್ರಗಳನ್ನು ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಲ್ಯಾಬ್ಗಳನ್ನು ತುರ್ತಾಗಿ ಸ್ಥಾಪಿಸಲು ಜಿಲ್ಲಾಡಳಿತ ಸಿದ್ಧವಾಗಬೇಕು ಎಂದು ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ. ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಪ್ರಸ್ತುತ ಆರ್ ಟಿ ಪಿ ಸಿ ಆರ್ ಫಲಿತಾಂಶವನ್ನು ಪಡೆಯಲು 48 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಂತರರಾಜ್ಯ ಪ್ರಯಾಣಕ್ಕೆ ಪರೀಕ್ಷಾ ಫಲಿತಾಂಶಗಳು ಕಡ್ಡಾಯವಾಗಿರುವುದರಿಂದ, ಈಗಿರುವ ಚೆಕ್ಪೋಸ್ಟ್ಗಳಲ್ಲಿ ಜನದಟ್ಟಣೆ ಮತ್ತು ಪರೀಕ್ಷಾ ಫಲಿತಾಂಶಗಳನ್ನು ಪಡೆಯುವಲ್ಲಿ ವಿಳಂಬವಾಗುವ ಅಪಾಯವಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೆ ರೋಗದ ಹರಡುವಿಕೆಯು ತೀವ್ರಗೊಳ್ಳುವ ಸಾಧ್ಯತೆ ಇದೆ.
ಅಂತಾರಾಜ್ಯ ಪ್ರಯಾಣಿಕರಿಗೆ ಕೋವಿಡ್ 19 ಟೆಸ್ಟ್ ಫಲಿತಾಂಶಗಳನ್ನು ಅದೇ ದಿನ ಲಭ್ಯವಾಗುವಂತೆ ಮಾಡಲು ಕಾಸರಗೋಡು ಜಿಲ್ಲಾಡಳಿತ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದೂ ಶ್ರೀಕಾಂತ್ ಆಗ್ರಹಿಸಿದರು. ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಅವರು ಮನವಿಯನ್ನು ಸಲ್ಲಿಸಿದ್ದಾರೆ.
