ಕಾಸರಗೋಡು : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-೨೦೨೧ ಪ್ರಶಸ್ತಿ ಪ್ರಕಟಿಸಿದ್ದು, ತೃತೀಯ ಪುರಸ್ಕಾರಕ್ಕೆ ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಎಂ.ಚೇವಾರ್ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
2021ನೇ ಸಾಲಿನ ಕಪಸಮ ತೃತೀಯ ಪ್ರಶಸ್ತಿ ಹಿರಿಯ ಕನ್ನಡಿಗ ಪತ್ರಕರ್ತರಿಗೆ ಕೊಡಮಾಡಲಾಗುತ್ತಿದೆ. ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ. ಸುನೀತಾ ಎಂ.ಶೆಟ್ಟಿ ಮತ್ತು ತೀರ್ಪುಗಾರರ ಸಮಿತಿಯ ಸಹ ಸದಸ್ಯರಾದ ಸಾ.ದಯಾ ಮತ್ತು ಹರೀಶ್ ಹೆಜ್ಮಾಡಿ ನಿರ್ಣಾಯದಂತೆ ಪತ್ರಕರ್ತ ಅಚ್ಯುತ ಚೇವಾರ್ ಇವರನ್ನು ಮಾಧ್ಯಮಶ್ರೀ-೨೦೨೧ ಪ್ರಶಸ್ತಿಗೆ ಆಯ್ಕೆ ನಡೆಸಲಾಗಿದೆ. ದಿ| ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸುಪುತ್ರ ಶ್ರೀ ವಿಕಾಸ್ ವೇಣುಗೋಪಾಲ್ ಪರಿವಾರದ ಸಹಕಾರ ಮತ್ತು ಕಪಸಮ ಸಂಘದ ಪ್ರಶಸ್ತಿನಿಧಿಯೊಂದಿಗೆ ವಾರ್ಷಿಕವಾಗಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ 25,೦೦೦/-(ಇಪ್ಪತ್ತೈದು ಸಾವಿರ) ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ಹೊಂದಿರುತ್ತದೆ.
ಪ್ರಥಮ ಪ್ರಶಸ್ತಿ (20l9) ಮುಂಬಯಿಯ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಇವರಿಗೆ ದ್ವಿತೀಯ ಪ್ರಶಸ್ತಿಯನ್ನು (2020) ಮುಂಬಯಿಯಲ್ಲಿನ ಹಿರಿಯ ಪತ್ರಕರ್ತ ಶ್ರೀ ಜಿ.ಕೆ ರಮೇಶ್ ಇವರಿಗೆ ಪ್ರದಾನಿಸಿ ಗೌರವಿಸಲಾಗಿದೆ. ಇದೇ ಸೆ.19ನೇ ಭಾನುವಾರ ಬೆಳಿಗ್ಗೆ ಲೋಟಸ್ ಸಭಾಗೃಹ, ಸಾಲೀಟರಿ ಕಾರ್ಪೋರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಈ ಪುರಸ್ಕಾರ ಪ್ರದಾನಿಸಲಾಗುವುದು ಎಂದು ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಮತ್ತು ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
