ಮಂಗಳೂರು : ಗಣೇಶ ಚತುರ್ಥಿ ಹಬ್ಬವನ್ನು ದೇಶ, ವಿದೇಶಗಳಲ್ಲಿ ಅತೀ ದೊಡ್ಡ ಹಬ್ಬವಾಗಿ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಲವಾರು ಭಕ್ತರು ಸೇರಿಕೊಂಡು ಸಮಿತಿಯನ್ನು ಮಾಡಿಕೊಂಡು ಶ್ರೀ ಗಣೇಶೋತ್ಸವವನ್ನು ನಡೆಸುತ್ತಾರೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲೂ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ಜರಗುತ್ತಾ ಬರುತ್ತಿದೆ. ಈ ಎರಡು ವರ್ಷಗಳಲ್ಲಿ ಕೋವಿಡ್ ಮಹಾಮಾರಿಯ ಕಾರಣದಿಂದ ಕಡಿಮೆ ಜನರ ಭಾಗವಹಿಸುವಿಕೆ ಸೇರಿದಂತೆ ಕೋವಿಡ್ ಮಾನದಂಡಗಳನ್ನು ಅನುಸರಿಸಿಕೊಂಡು ಆಚರಿಸಬೇಕಾಗಿದೆ ಅದು ಒಂದು ವಿಚಾರ.
ಆದರೆ ನಾವು ಹೇಳ ಹೊರಟಿದ್ದು ಶ್ರೀ ಗಣೇಶೋತ್ಸವವೇ ಆದರೂ ಕೊಂಚ ವಿಶೇಷ. ಹೌದು ಇದು ಮುಗ್ಧ ಮನಸ್ಸಿನ ಮಕ್ಕಳ ಗಣೇಶೋತ್ಸವ ಇಲ್ಲಿ ಪೂಜೆಯು ಅವರಿಂದಲೇ ಸಮಿತಿಯೂ ಅವರದ್ದೇ ಇಲ್ಲಿ ವಿಜೃಂಭಣೆ ಇಲ್ಲದಿದ್ದರೂ ವಿಶೇಷತೆ ಇದೆ. ಹೌದು ಮಂಗಳೂರು ಹೊರವಲಯದ ಕಣ್ಣೂರಿನ 3ನೇ ವರ್ಷದ ಬಾಲ ಶ್ರೀ ಗಣೇಶೋತ್ಸವ. ಒಟ್ಟು ಏಳು ಮಂದಿ ಮಕ್ಕಳು ಸೇರಿ ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು 3 ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಪೃಥ್ವಿ ರಾಜ್ ಕಂಬ್ಲಕೊಡಿ, ಲಿಖಿತ್ ಕಂಬ್ಲಕೊಡಿ, ಅರ್ಪಿತ್ ಬಲ್ಲೂರು, ಅಥಿತ್ ಬಲ್ಲೂರು , ಭವಿಷ್ ಕಂಬ್ಲಕೊಡಿ, ಜ್ಯೋತಿಷ್ ಬಲ್ಲೂರು, ವರ್ಷಿತ್ ಕಂಬ್ಲಕೊಡಿ , ರಿಶನ್ ಬಲ್ಲೂರು, ಚಿರಾಗ್ ಕೊಡಕ್ಕಲ್ ಎಂಬ ಪುಟಾಣಿಗಳೇ ಈ ಗಣೇಶೋತ್ಸವದ ರೂವಾರಿಗಳು. ಇಬ್ಬರು ಮಕ್ಕಳು ಸೇರಿಕೊಂಡು ಗಣಪತಿ ಪ್ರತಿಷ್ಠಾಪನೆಗೊಳಿಸಿ ಪ್ರಾರಂಭಿಸಿದ್ದರು. ನಂತರ ದಿನದಲ್ಲಿ ಈ ಬಗ್ಗೆ ಸಮೀಪದ ಬನದ ಪುರೋಹಿತರಲ್ಲಿ ವಿಚಾರಿಸಿದಾಗ ಮೂರು ವರ್ಷಗಳ ಕಾಲ ಒಂದು ದಿನದ ಗಣಪತಿ ಪ್ರತಿಷ್ಠಾಪನೆಗೊಳಿಸಿ ಪೂಜೆ ಮಾಡಿ ಎಂದು ಮಾರ್ಗದರ್ಶನ ನೀಡಿದ್ದರು. ಅಂತೆಯೇ ಈಗ ಹಿರಿಯರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ.
ಗಣಪತಿ ವಿಗ್ರಹದ ವಿಸರ್ಜನೆ ತೆಗೆದುಕೊಂಡು ಹೋಗಲು ವಿಶೇಷವಾದ ನಾಲ್ಕು ಚಕ್ರದ ಗಾಡಿಯನ್ನು ಇವರು ನಿರ್ಮಿಸಿದ್ದಾರೆ. ಸಮೀಪದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಣ್ಣೂರು ಇಲ್ಲಿನ ವಿಸರ್ಜನಾ ಶೋಭಾಯಾತ್ರೆ ಮುಗಿದ ಕೂಡಲೇ ನಾವೂ ಗಣಪತಿ ವಿಗ್ರಹವನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ ಕಾರ್ಯಕ್ರಮದ ರೂವಾರಿಗಳು. ಅಂದು ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಅನ್ನದಾನದ ವ್ಯವಸ್ಥೆಯನ್ನು ಹಿರಿಯರ ಸಹಕಾರದೊಂದಿಗೆ ಮಾಡಿದ್ದಾರೆ. ಇದನ್ನು ಮುಂದೆಯೂ ಒಂದು ದಿನದ ಕಾರ್ಯಕ್ರಮವಾಗಿ ನಡೆಸುವ ಯೋಜನೆ ಹಾಕಿದ್ದಾರೆ.
ವರದಿ : ವಂಶಿ ಪಂಡಿತ್ ಕಣ್ಣೂರು
