ಮಂಜೇಶ್ವರ:- ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮುಂದಾಳು, ಭಜನಾ ಸಂಘಟನಾ ರೂವಾರಿ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಮಾಜಿ ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿಯ ಪಧಾಧಿಕಾರಿ ಹೊಸಂಗಡಿ ಶ್ರೀ ವೀರಭದ್ರ ದೇವಸ್ಥಾನ ಬಳಿಯ ನಿವಾಸಿ ಮೋಹನ್ ದಾಸ್ ಬಿ.ಎಂ (55) ಹೃದಯಾಘಾತದಿಂದ ಇಂದು ಬೆಳಿಗ್ಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿದ್ದು, ಭಜನಾ ಸಂಕೀರ್ತನಾಕಾರರಾಗಿ, ಭಜನಾ ಸಂಘಟಕರಾಗಿ ಕನಿಲ ಶ್ರೀ ಭಗವತೀ ಕ್ಷೇತ್ರದ ಭಜನಾ ಮಂಡಳಿಯ ಪ್ರಮುಖರು, ಪಟ್ಟತ್ತಮೊಗರು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಭಜನಾ ಮಂಡಳಿಯ ಗುರುಗಳಾಗಿ ಹಲವಾರು ಮಂದಿಗಳಿಗೆ ಭಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು. ಇವರಿಂದ ಪ್ರೇರಿತರಾದ ಹಲವಾರು ಮಂದಿ ಇದೀಗ ಭಜನಾ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು, ಭಜಕರಾಗಿ ಪ್ರಸಿದ್ಧಿಯನ್ನು ಪಡೆದಿರುವರು. ಕನಿಲ ಶ್ರೀ ಭಗವತೀ ಕ್ಷೇತ್ರದ ಶ್ರೀ ಭಗವತೀ ಸೇವಾ ಸಂಘ ವಾಮಂಜೂರು ಇದರ ಸದಸ್ಯರಾಗಿದ್ದು, ಚಕ್ರವರ್ತಿ (ರಿ.) ಹೊಸಂಗಡಿ ಸಂಸ್ಥೆಯ ಮಾಜಿ ಸದಸ್ಯರಾಗಿದ್ದು, ಸಂಸ್ಥೆಯ ವಿವಿಧ ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವರು. ಪ್ರಸ್ತುತ ಕೊಡ್ಡೆ ಕರ್ಕೇರ ತರವಾಡಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವರು. ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲದೇ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮಾಲಾಧಾರಿಗಳಾಗಿ ಶಬರಿಮಲೆ ಕ್ಷೇತ್ರ ದರ್ಶನಗೈದಿದ್ದರು. ಮತ್ತು ಸಾರ್ವಜನಿಕ ಶ್ರೀ ಮಂಜೇಶ್ವರ ಗಣೇಶೋತ್ಸವದಲ್ಲಿ ಕೂಡಾ ಪಧಾಧಿಕಾರಿಗಳಾಗಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಬಾರಿಯ 41 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ 4 ದಿನಗಳ ಪರ್ಯಂತ ನಡೆಯುತ್ತಿರುವ ವಿವಿಧ ಭಜನಾ ಸಂಘಟನೆಗಳ ಭಜನಾ ಸಂಕೀರ್ತನೆ ಕಾರ್ಯಕ್ರಮದ ರೂವಾರಿಯಾಗಿದ್ದರು.
ಮೊನ್ನೆಯಿಂದ ನಿನ್ನೆ ರಾತ್ರಿಯ ತನಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ, ವೈದಿಕ ವಿಭಾಗದಲ್ಲಿ ಎಲ್ಲಾ ಕೆಲಸ - ಕಾರ್ಯಗಳನ್ನು ಸಂಯಮದಿಂದ ನಿಷ್ಠೆಯಿಂದ ಮಾಡುತಿದ್ದರು. ಬಳಿಕ ರಾತ್ರಿ 11.30 ಕ್ಕೆ ಮನೆಗೆ ತೆರಳಿದ ಇವರಿಗೆ ಹೃದಯಾಘಾತ ಉಂಟಾಯಿತು. ಕೂಡಲೇ ಮನೆಯವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಇಂದು ಬೆಳಗ್ಗೆ 6.00 ಗಂಟೆಗೆ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿಧನರಾದರು.
ಮೃತರು ಮಂಗಳೂರಿನಲ್ಲಿ ವಾಚ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಕನಿಲ ಶ್ರೀ ಭಗವತೀ ಕ್ಷೇತ್ರದ ಆನಂದ ಗುರಿಕಾರರ - ರೇವತಿ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ಜಯಶ್ರೀ, ಮಕ್ಕಳಾದ ಅನುಷಾ, ದೀಕ್ಷಾ, ಸಹೋದರ - ಸಹೋದರಿಯರಾದ ಚಂದ್ರಹಾಸ ಬಿ.ಎಂ, ಯಶವಂತಿ, ಧನಂಜಯ, ರೋಹಿದಾಸ್ ಮಸ್ಕತ್, ಅರವಿಂದ ಹಾಗೂ ಅಪಾರ ಬಂಧು - ಮಿತ್ರರನ್ನ ಅಗಲಿದ್ದಾರೆ.
ಮೃತರ ಮೃತದೇಹವನ್ನು ಅಪರಾಹ್ನ 2 ಗಂಟೆಗೆ ಮನೆಗೆ ತರಲಾಗುವುದು ಬಳಿಕ ಅಂತ್ಯ ಸಂಸ್ಕಾರದ ಕಾರ್ಯ ನಡೆಯಲಿದೆ.
ಮೃತರ ನಿಧನಕ್ಕೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಸೇವಾ ಸಮಿತಿ, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಶ್ರೀ ಅಯ್ಯಪ್ಪ ಭಕ್ತ ವೃಂದ, ಶ್ರೀ ಅಯ್ಯಪ್ಪ ಮಾತೃ ಮಂಡಳಿ, ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ (ರಿ.) ಹೊಸಂಗಡಿ, ಚಕ್ರವರ್ತಿ (ರಿ.) ಹೊಸಂಗಡಿ, ಕನಿಲ ಶ್ರೀ ಭಗವತೀ ಕ್ಷೇತ್ರದ ಭರಣ ಸಮಿತಿ, ಶ್ರೀ ಭಗವತೀ ಸೇವಾ ಸಂಘ ವಾಮಂಜೂರು, ಬಿಜೆಪಿ 13 ವಾರ್ಡ್ ಬೂತ್ ಸಮಿತಿ, ಶ್ರೀ ಕಾಳಿಕಾ ಪರಮೇಶ್ವರೀ ಕ್ಷೇತ್ರದ ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀ ಆದಿ ಕ್ಷೇತ್ರ ರಕ್ತೇಶ್ವರಿ ಕ್ಷೇತ್ರ ಹೊಸಂಗಡಿಯ ಆಡಳಿತ ಸಮಿತಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃ ಮಂಡಳಿ ಕಾಸರಗೋಡು ಜಿಲ್ಲಾ ಸಮಿತಿ, ಮಂಜೇಶ್ವರ ಖಂಡ ಸಮಿತಿ ಗಾಢವಾದ ಸಂತಾಪ ಸೂಚಿಸಿದ್ದಾರೆ.
