ಮಂಜೇಶ್ವರ: ಗ್ರೀಸ್ ದೇಶದ ಅಥೆನ್ಸ್ ನಲ್ಲಿ 2021 ನವೆಂಬರ್ 6 ಮತ್ತು 7 ರಂದು ನಡೆಯಲಿರುವ ಅಂತರ್ ರಾಷ್ಟ್ರೀಯ ಮಟ್ಟದ ರಂಗಭೂಮಿ ಸಮಾವೇಶದ ವಿಚಾರ ಸಂಕಿರಣಕ್ಕೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಬಿ. ಎಂ. ಹೊಸಂಗಡಿ ಅವರ "ಚಾಲೆಂಜಸ್ ಆಫ್ ಅಡಾಪ್ಟೇಷನ್: ಅಜಾಕ್ಸ್ ಅಸ್ ಅಶ್ವತ್ಥಾಮನ್" ('ಅಶ್ವತ್ಥಾಮನ್ ಆಗಿ ಅಜಾಕ್ಸ್ : ರೂಪಾಂತರದ ಸವಾಲುಗಳು' ) ಎಂಬ ಸಂಶೋಧನಾ ಪ್ರಬಂಧ ಆಯ್ಕೆಯಾಗಿದೆ.
ಅಥೆನ್ಸ್ ಅಪಿಥೆರಸ್ ಫೆಸ್ಟಿವಲ್ ನ ಭಾಗವಾಗಿ ಇರುವ ವ್ಯಾಲ್ಯೂಸ್ ಅಕ್ರಾಸ್ ಸ್ಪೇಸ್ ಅಂಡ್ ಟೈಮ್ ( ವಿ.ಎ.ಎಸ್. ಟಿ.) ಎಂಬ ಯೋಜನೆಯಡಿಯ ಈ ವಿಚಾರಸಂಕಿರಣವು ಅಥೆನ್ಸ್ ನ ಮರೆಸಲೆಯೋ ವಿದ್ಯಾಲಯದಲ್ಲಿ ನಡೆಯಲಿದೆ. ನ್ಯಾಷನಲ್ ಅಂಡ್ ಕಪೋಡಿಸ್ಟ್ರಿಯನ್ ಯೂನಿವರ್ಸಿಟಿ ಆಫ್ ಅಥೆನ್ಸ್, ಅರಿಸ್ಟಾಟಲ್ ಯೂನಿವರ್ಸಿಟಿ ಆಫ್ ಥೆಸ್ಸಲೊನಿಕಿ - ಇವು ಆಯೋಜಿಸುತ್ತಿರುವ ವಿಚಾರ ಸಂಕಿರಣವನ್ನು ಗ್ರೀಸ್ ದೇಶದ ಸಂಸ್ಕೃತಿ ಮತ್ತು ಕ್ರೀಡಾ ಸಚಿವಾಲಯ, ಗ್ರೀಸ್ ನ ರಾಷ್ಟ್ರೀಯ ಬ್ಯಾಂಕ್ ಇಯಾನಿಕ್ ಪನೇಜಗಳು ಪ್ರಾಯೋಜಿಸುತ್ತಿವೆ. ಯುರೋಪಿಯನ್ ಯೂನಿಯನ್ ನ ಸಹ ಪ್ರಾಯೋಜಕತ್ವವೂ ಇದೆ. ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿ ಬಳಿಯ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಬಳಿಯ ನಿವಾಸಿಯಾಗಿರುವ ಡಾ. ಬಾಲಕೃಷ್ಣ ಹೊಸಂಗಡಿಯವರು ಪುರೋಹಿತ ದಿ. ಸುಬ್ರಾಯ ಆಚಾರ್ಯ - ಗೀತ ದಂಪತಿಯ ಪುತ್ರನಾಗಿದ್ದು, ಪ್ರಸ್ತುತ ಮಂಜೇಶ್ವರ ಗೋವಿಂದ ಪೈ ಕಾಲೇಜ್ ಬಳಿ ತಾಯಿ, ಪತ್ನಿ ದಿವ್ಯಾ ಬಿ.ಹೊಸಂಗಡಿ ಮಕ್ಕಳಾದ ಕು. ಅಸಾವರಿ ಮತ್ತು ಅನುದ್ಯುತಿ ಜೊತೆ ವಾಸಿಸುತ್ತಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ

ಅಭಿನಂದನೆಗಳು ಬಾಲು. ಒಳ್ಳೆಯದಾಗಲಿ
ReplyDelete